ಮೂಡಿಗೆರೆ: ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಟ್ರಕ್ ಸಂಚರಿಸುವ ಕಾರಣ ಅವಘಡ ಮತ್ತು ಟ್ರಾಫಿಕ್ ಜಾಮ್ ನಿತ್ಯ ಸಂಭವಿಸುತ್ತಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಸೋಮವಾರ ಚಾರ್ಮಾಡಿ ಘಾಟ್ ಮಧ್ಯಭಾಗದಲ್ಲಿರುವ ಅಣ್ಣಪ್ಪಸ್ವಾಮಿ ದೇವಸ್ಥಾನದ ಬಳಿ ಮೂಡಬಿದ್ರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಬೆಳಗ್ಗೆ 10 ಚಕ್ರದ ಟ್ಯಾಂಕರ್ ಘಾಟ್ ಪ್ರದೇಶದ ರಸ್ತೆ ಮಧ್ಯೆ ಅಡ್ಡಲಾಗಿ ನಿಂತ ಪರಿಣಾಮ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಚಾರ್ಮಾಡಿ ಘಾಟ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಚಲಿಸಲು ಸಾಧ್ಯವಾಗದೆ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಇದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಘಾಟಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಟ್ಯಾಂಕ್ ಅನ್ನು ಬದಿಗೆ ಸರಿಸಿದ ಬಳಿಕ ಒಂದೆ ಬದಿಯಲ್ಲಿ ಎರಡು ಕಡೆಯ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಇದರಿಂದ ಇಡೀ ದಿನ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸಾರಿಗೆ ಬಸ್‌ಗಳು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ಪರಿಣಾಮ ಪ್ರಯಾಣಿಕರು ಪರದಾಡಿದರು. ಆಸ್ಪತ್ರೆಗೆ ತೆರಳಬೇಕಾಗಿದ್ದ ರೋಗಿಗಳು, ಹಿರಿಯ ನಾಗರಿಕರು ರಸ್ತೆಯಲ್ಲಿ ಸಿಲುಕಿಕೊಳ್ಳಬೇಕಾಯಿತು. ಮಕ್ಕಳು ಹಸಿವಿನಿಂದ ಅಳುತ್ತಿದ್ದಿದ್ದು ಕಂಡು ಬಂತು.