ನ್ಯೂಸ್

ಚಾಮುಂಡಿಬೆಟ್ಟದ ಅರಣ್ಯಕ್ಕೆ ಬೆಂಕಿ

ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಕಿಡಿಗೇಡಿಗಳ ಕೃತ್ಯದಿಂದ ಎರಡು ಕಡೆ ಬೆಂಕಿ ಹೊತ್ತಿ ಉರಿಯುತ್ತಿದ್ದು, 100 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಮಾಡಲಾಗುತ್ತಿದೆ. ಚಾಮುಂಡಿಬೆಟ್ಟ ಅರಣ್ಯ ಪ್ರದೇಶದ ಎರಡು ಕಡೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಟ್ಟವನ್ನು ಆವರಿಸಿದೆ. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಜಂಟಿಯಾಗಿ ಬೆಂಕಿ ಆರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಂಕಿ ಕೆನ್ನಾಲಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ಬೆಂಕಿಯ ಕೆನ್ನಾಲಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಮಾಡುತ್ತಿದೆ. ಆದರೆ ಬೆಂಕಿ ತಹಬದಿಗೆ ಬರುತ್ತಿಲ್ಲ. ಗಾಳಿಂು ವೇಗ ಹೆಚ್ಚಿರುವ ಕಾರಣ ಬೆಂಕಿ ವೇಗವಾಗಿ ಹರಡಿದೆ. ಹುಲ್ಲುಗಾವಲು ಮತ್ತು ನೆಲದ ಮೇಲೆ ಒಣ ಕೊಂಬೆಗಳು ಹೆಚ್ಚಾಗಿದ್ದರಿಂದ ಬೆಂಕಿ ವೇಗವಾಗಿ ಹರಡಿದ್ದು, ದಟ್ಟವಾದ ಹೊಗೆ ಹೊರಹೊಮ್ಮಿತು. ಉತ್ತನಹಳ್ಳಿ ಮಾರ್ಗದಲ್ಲಿ ಬರುವ ಬೆಟ್ಟದ ಪ್ರದೇಶ ಹಾಗೂ ಲಲಿತಾದ್ರಿಪುರದ ಭಾಗದಲ್ಲಿ ಮಧ್ಯಾಹ್ನ 12.30ರಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ವ್ಯಾಪಿಸಿದೆ. ಬೆಟ್ಟದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟವಾಗಿ ಹೊಗೆಯಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಮತ್ತು ಪೊಲೀಸರು ಬೆಂಕಿ ನಂದಿಸಲು ಹೋದಾಗ, ಬೆಂಕಿ ಎತ್ತರಕ್ಕೆ ಚಿಮ್ಮಿ ಎಲ್ಲೆಡೆ ಆವರಿಸಿದ್ದರಿಂದ ಸ್ಥಳದಿಂದ ಕಾಲ್ಕಿತ್ತರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದಳ 50ಕ್ಕೂ ಹೆಚ್ಚು ಸಿಬ್ಬಂದಿ ಡಿಸಿಎಫ್ ಬಸವರಾಜು ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. 9 ಅಗ್ನಿಶಾಮಕ ದಳದ ವಾಹನ, ಒಣಹುಲ್ಲು ಮೂಲಕ ಬೆಂಕಿಯನ್ನು ನಿಯಂತ್ರಿಸುವ ಕಾರ್ಯ ನಡೆಸಿದರು. ಬೆಂಕಿ ನಿಯಂತ್ರಣ ಪ್ರಕ್ರಿಯೆಗಳ ನಂತರವೂ ರಾತ್ರಿ ಕೂಡ ನಿಗಾ ವಹಿಸಲು ಮುಂಜಾಗ್ರತಾ ಕ್ರಮ ಕೈಕೊಳ್ಳಲಾಗಿದೆ. ಬೆಟ್ಟದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಪ್ರವಾಸಿಗರು ಮತ್ತು ಚಾಮುಂಡಿ ಬೆಟ್ಟದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದ ಪ್ರವಾಸಿಗರು ವಾಹನ ನಿಲ್ಲಿಸಿ ಬೆಂಕಿ ಅನಾಹುತ ನೋಡಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರವಾಸಿಗರನ್ನು ಸ್ಥಳದಿಂದ ದೂರ ಕಳುಹಿಸಿದರು. ಮುಂಜಾಗ್ರತಾ ಕ್ರಮವಾಗಿ ಉತ್ತನಹಳ್ಳಿ ಮಾರ್ಗವಾಗಿ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ.

ಬೆಂಕಿಯನ್ನು ನಿಂುಂತ್ರಣಕ್ಕೆ ತರುವ ಮೊದಲು ಅರಣ್ಯ ಇಲಾಖೆ ಸಿಬ್ಬಂದಿ 4-5 ಗಂಟೆಗಳಿಗೂ ಹೆಚ್ಚು ಕಾಲ ಹೋರಾಡಿದರು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, 9 ಫೈಯರ್ ಇಂಜಿನ್‌ಗಳನ್ನು (4 ಕ್ಯೂಆರ್‌ವಿ ವಾಹನ, 5 ಟೆಂಡರ್ ವಾಹನ) ಬಳಸಿಕೊಂಡು, ಒಣಹುಲ್ಲು, ಕಳೆಗಳಲ್ಲಿ ಕಾಣಿಸಿಕೊಂಡ ನೆಲಬೆಂಕಿಯನ್ನು ನಿಯಂತ್ರಿಸುವಲ್ಲಿ ಎಲ್ಲ ಸಿಬ್ಬಂದಿ ಸಹಕರಿಸಿದ್ದಾರೆ. ಬೆಂಕಿ ನಂದಿಸುವ ಪ್ರಕ್ರಿಯೆ ರಾತ್ರಿಯೂ ಮುಂದುವರಿಯಲಿದೆ. -ಬಸವರಾಜು, ಡಿಸಿಎಫ್