ನ್ಯೂಸ್

ಚಾಮುಂಡಿ ಬೆಟ್ಟದ ಸೇವೆಗಳ ಶುಲ್ಕ ಏರಿಕೆಗೆ ಆಕ್ರೋಶ

ಚಾಮುಂಡಿ ಬೆಟ್ಟದಲ್ಲಿ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರು, ಆಷಾಢದಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಸಮರ್ಪಕ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಹಾಗೂ ಚಾಮುಂಡೇಶ್ವರಿ ದೇವಿಯ ಸೇವೆಗಳ ಶುಲ್ಕಗಳನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚಾಮುಂಡಿ ಬೆಟ್ಟದಲ್ಲಿ ಸರಿಯಾಗಿ ಕುಡಿಯುವ ನೀರೇ ಇಲ್ಲ. 5-6 ದಿನಗಳಿಗೊಮ್ಮೆ ಬೆಟ್ಟಕ್ಕೆ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಅಲ್ಲಿನ ಸ್ಥಳೀಯ ನಿವಾಸಿಗಳು ಪರದಾಡುತ್ತಿದ್ದಾರೆ. ಬಹಳ ವರ್ಷಗಳ ಹಿಂದೆಯೇ ಆರಂಭವಾದ ಪೈಪ್‌ಲೈನ್ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಇದರಿಂದ ಬೆಟ್ಟದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಜತೆಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಸರಿಯಾದ ಮೂಲಸೌಕರ್ಯಗಳೇ ಇಲ್ಲ. ಕುಡಿಯುವ ನೀರು, ಶೌಚಗೃಹ, ಸ್ನಾನಗೃಹಗಳಿಲ್ಲ. ಈಗಿರುವ ಒಂದೇ ಶೌಚಗೃಹದಲ್ಲಿ ಮೂತ್ರ, ಮಲ ವಿಸರ್ಜನೆಗೆ 5, 10 ರೂ. ವಸೂಲಿ ಮಾಡಲಾಗುತ್ತಿದೆ. ಇದನ್ನು ಉಚಿತ ಮಾಡಬೇಕು. ಆಷಾಢದಲ್ಲಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುವುದರಿಂದ ಕೂಡಲೇ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು 5 ಭಾಗ್ಯಗಳನ್ನು ಘೋಷಿಸಿ ಆ ಯೋಜನೆಗಳಿಗೆ ಹಣ ಪೂರೈಸಲಾಗದೆ ಚಾಮುಂಡೇಶ್ವರಿ ದೇವಸ್ಥಾನದ ಸೇವಾ ಶುಲ್ಕಗಳನ್ನು ಏಕಾಏಕಿ 300 ರೂ. ನಿಂದ 550 ರೂ.ಗೆ ಏರಿಸಿರುವುದು ಖಂಡನೀಯ. ಭಕ್ತಾದಿಗಳ ಧಾರ್ಮಿಕ ಆಚರಣೆ ಮೇಲೆ ಕಣ್ಣಿಟ್ಟು, ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಹೊರಟಿರುವುದು ದುರದೃಷ್ಟಕರ. ಈ ವರ್ಷ ಆಷಾಢ ಶುಕ್ರವಾರದ ವಿಶೇಷ ದರ್ಶನಕ್ಕಾಗಿ 2000 ರೂ. ಟಿಕೆಟ್ ಮಾಡಿರುವುದು ಖಂಡನೀಯ. ಸಾರ್ವಜನಿಕರಿಂದ ಹಣವನ್ನು ಹಗಲು ದರೋಡೆ ಮಾಡಲು ಹೊರಟಿದೆ. ದೇವರ ದರ್ಶನಕ್ಕೆ ಸರ್ಕಾರ ಇಷ್ಟೊಂದು ದುಬಾರಿ ಟಿಕೆಟ್ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಜನರಿಗೆ ಒಂದು ಕೈಯಲ್ಲಿ ಕೊಟ್ಟು ದೇವರ ಹೆಸರಿನಲ್ಲಿ ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ. ಕೂಡಲೇ 2000 ರೂ. ದುಬಾರಿ ಟಿಕೆಟ್ ರದ್ದುಗೊಳಿಸಬೇಕು. ಸೇವಾಶುಲ್ಕವನ್ನು ಯಥಾ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪದಾಧಿಕಾರಿಗಳಾದ ಪಿ.ಪ್ರಜೀಶ್, ಗೋಲ್ಡನ್ ಸುರೇಶ್, ಲಕ್ಷ್ಮೀದೇವಿ, ಪ್ರಭುಶಂಕರ್, ಶಿವಲಿಂಗಯ್ಯ, ಕೇಬಲ್ ರಮೇಶ್, ಸಿಂಧುವಳ್ಳಿ ಶಿವಕುಮಾರ್, ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ಡಾ.ಶಾಂತರಾಜೇ ಅರಸ್, ಲಕ್ಷ್ಮೀ, ನೇಹಾ, ಹನುಮಂತಯ್ಯ, ಭಾಗ್ಯಮ್ಮ ಇತರರಿದ್ದರು.