ಬುದ್ಧಿವಾದ ಹೇಳಿದ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದವನಿಗೆ 7ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ.
ಪ್ರಶಾಂತ್ ಎಂಬಾತ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2022ರ ಮಾರ್ಚ್ 6ರಂದು ಧನಂಜಯ ಎಂಬವರು ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಬಾರ್‌ವೊಂದರಲ್ಲಿ ಮದ್ಯಪಾನ ಮಾಡಿ ತೆರಳುತ್ತಿದ್ದರು. ಈ ವೇಳೆ ವಾಹನ ನಿಲುಗಡೆ ಸ್ಥಳದಲ್ಲಿ ಪ್ರಶಾಂತ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಲೈಂಗಿಕ ಅಲ್ಪಸಂಖ್ಯಾತ ಮನು ಜತೆಗೆ ಕಿರುಚಾಡುತ್ತಿದ್ದರು. ಇದನ್ನು ಗಮನಿಸಿದ ಧನಂಜಯ ಕಿರುಚಾಡಬೇಡಿ ಎಂದು ಬುದ್ಧಿವಾದ ಹೇಳಿದ್ದರು. ಈ ವೇಳೆ ಪ್ರಶಾಂತ್ ಚಾಕುವಿನಿಂದ ದಾಳಿ ನಡೆಸಿದ್ದ. ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರಂ ಠಾಣೆ ಇನ್ಸ್‌ಪೆಕ್ಟರ್ ರಾಜು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ರಮೇಶ್, ಅಪರಾಧಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.