ಸೊರಬ ತಾಲೂಕಿನ ಹಲಸಿನಕೊಪ್ಪ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿರುವುದು. 
ನ್ಯೂಸ್

ಚಳಿಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ

ಶಿವಪ್ಪ ಹಿತ್ಲರ್ ಸೊರಬ

ಚಳಿಗಾಲವೇ ಮುಗಿದಿಲ್ಲ, ಬಿರು ಬಿಸಿಲೂ ಇಲ್ಲ. ಆಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ತಾಲೂಕಿನ ದೂಗೂರು ಗ್ರಾಪಂ ವ್ಯಾಪ್ತಿಯ ಹಲಸಿನಕೊಪ್ಪ ಗ್ರಾಮಕ್ಕೆ ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಲಾಗುತ್ತಿದೆ.

ತಾಲೂಕಿನ ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಬದಲಿಗೆ ಕಣುಕು ನೀರು ಸರಬರಾಜಾಗುತ್ತಿದೆ. ಹಲಸಿನಕೊಪ್ಪ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಇಲ್ಲಿನ ಕುಡಿಯುವ ನೀರಿನ ಕೊಳವೆಬಾವಿಯಲ್ಲಿ ಕಣುಕು ನೀರು ಬರುತ್ತಿದ್ದು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮದ ಹತ್ತಿರದ ಖಾಸಗಿ ಕೊಳವೆ ಬಾವಿ ಇರುವವರು ಇಲ್ಲಿಯವರೆಗೆ ಕುಡಿವ ನೀರು ಪೂರೈಕೆ ಮಾಡುತ್ತಿದ್ದರು. ಆದರೆ ಈಗ ಕೃಷಿಗೆ ಹೆಚ್ಚಿನ ನೀರಿನ ಅಗತ್ಯ ಇರುವುದರಿಂದ ಗ್ರಾಮಕ್ಕೆ ನೀರು ಪೂರೈಕೆ ಕಷ್ಟವಾಗಿದೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದನ್ನು ಮನಗಂಡ ಗ್ರಾಪಂ ಸೋಮವಾರದಿಂದ ಟ್ಯಾಂಕರ್ ಮೂಲಕ ದಿನ ಬಿಟ್ಟು ದಿನ ನೀರು ಪೂರೈಕೆಗೆ ಮುಂದಾಗಿದೆ.

ಸಾಗರ ತಾಲೂಕಿಗೆ ಹೊಂದಿಕೊಂಡಂತೆ ಇರುವ ತಾಲೂಕಿನ ಗಡಿ ಭಾಗದ ಮಾವಿನ ಹೊಳೆಯ ಹರಿವಿನಲ್ಲಿರುವ ಹಲಸಿನಕೊಪ್ಪ ಗ್ರಾಮದಲ್ಲೇ ಶುದ್ಧ ಕುಡಿವ ನೀರಿಗೆ ಬರ. ಇಲ್ಲಿ 35 ಮನೆಗಳಿದ್ದು, 200ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಕೆಲವರು ಮಾತ್ರ ಸ್ವಂತ ಕೊಳವೆ ಬಾವಿಯಿಂದ ನೀರು ಪಡೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಜಲಜೀವನ್ ಮಿಷನ್ ಸಂಪರ್ಕ ಇದ್ದರೂ ಇಲ್ಲದಂತಾಗಿದೆ. ಈ ಹಿಂದೆ ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಯಿಂದಲೇ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಹಾಗೂ ಟ್ಯಾಂಕರ್ ನಿರ್ಮಾಣ ಮಾಡಿ ಅದೇ ಕಣುಕು ನೀರು ಪೂರೈಕೆ ಮಾಡಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಹೊಸ ಕೊಳವೆ ಬಾವಿ ಕೊರೆಸಬೇಕಿದ್ದ ಗುತ್ತಿಗೆದಾರ ಹಳೇ ಬಾವಿಗೆ ಪೈಪ್‌ಲೈನ್ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.

ಗ್ರಾಮಕ್ಕೆ ಹೊಸ ಕೊಳವೆ ಬಾವಿ ಅಗತ್ಯವಿದೆ. ಆದರೆ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅನುದಾನ ಇಲ್ಲ. ಕೊಳವೆ ಬಾವಿ ಕೊರೆಸಿದ ಗುತ್ತಿಗೆದಾರರಿಗೆ 2.19 ಕೋಟಿ ರೂ. ಬಾಕಿ ನೀಡಬೇಕಿದೆ. ಈಗ ಮತ್ತೆ ಕೊಳವೆ ಬಾವಿ ಕೊರೆಸಲು ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಅಲ್ಲದೆ ಗ್ರಾಪಂನ 15ನೇ ಹಣಕಾಸು ಯೋಜನೆಯಡಿ ಬರುವ ಕಾಮಗಾರಿ ನಿರ್ವಹಣೆ ಮಾಡಲು ಕೂಡ ಹಣವಿಲ್ಲ.