ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದ್ದು, ನಾಲ್ವರು ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಅರಮನೆ ರಸ್ತೆ ಅಂಡರ್‌ಪಾಸ್ ಬಳಿ ಶುಕ್ರವಾರ ರಾತ್ರಿ ೧೧:೨೦ ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಮರದ ಕೊಂಬೆಯೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗು ಸೇರಿದಂತೆ ನಾಲ್ವರು ಕಾರಿನಲ್ಲಿ ಆರ್.ಟಿ ನಗರ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪ್ಯಾಲೇಸ್ ರೋಡ್‌ನ ಅಂಡರ್‌ಪಾಸ್ ಬಳಿ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಂಡರ್‌ಪಾಸ್‌ನ ತಡೆಗೋಡೆಯಿಂದಾಗಿ ನಾಲ್ವರ ಜೀವ ಉಳಿದಿದೆ. ಕಾರು ರಸ್ತೆಯ ಮಧ್ಯ ಭಾಗದಲ್ಲಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಹಲಸೂರುಗೇಟ್ ಸಂಚಾರ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಂತರ ಬಿಬಿಎಂಪಿ ಅವರು ಮರ ತೆರವುಗೊಳಿಸಿದ್ದಾರೆ.