ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಮಂಗಳವಾರ ಓಕುಳಿ ಹಬ್ಬದ ಅಂಗವಾಗಿ ಜರುಗಿದ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ತೇರು ವಿಜೃಂಭಣೆಯಿಂದ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಸುಮಾರು ಎಂಟು ವರ್ಷದ ಬಳಿಕ ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಓಕುಳಿ ಹಬ್ಬವನ್ನು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಣೆ ಮಾಡಿ ಗ್ರಾಮದೇವತೆಯನ್ನು ಆರಾಧಿಸಿದರು. ಮಂಗಳವಾರ ಬೆಳಗ್ಗೆ 10 ಗಂಟೆ ಸಂದರ್ಭದಲ್ಲಿ ಸಲ್ಲಿದ ಶುಭಲಗ್ನದಲ್ಲಿ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ತಾಯಿಯ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿ ನಂತರ ಗ್ರಾಮದ ಕುರ್ಜು ಸುತ್ತ ಪ್ರದಕ್ಷಣೆ ಹಾಕಿ ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಿದ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತಾಧಿಗಳು ಮತ್ತು ಗ್ರಾಮಸ್ಥರು ಒಟ್ಟಾಗಿ ಸೇರಿ ರಥ ಎಳೆಯುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ತಾಯಿಯಲ್ಲಿ ಬೇಡಿಕೊಂಡರು. ಇದೇ ವೇಳೆ ದೂರದ ಊರಿಂದ ಗ್ರಾಮಕ್ಕೆ ಆಗಮಿಸಿದ ಭಕ್ತಾಧಿಗಳು ಪೂಜೆ ಸಲ್ಲಿಸಿದರು.
ಬಣ್ಣದ ಓಕುಳಿ ಸಂಭ್ರಮ: ಓಕುಳಿ ಹಬ್ಬದ ಹಿನ್ನೆಲೆ ಮಂಗಳವಾರ ನಡೆದ ನೀರಿನ ಓಕುಳಿಯಲ್ಲಿ ಯುವಕರು ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಹಲವಾರು ಮಂದಿ ಪರಸ್ಪರ ಬಣ್ಣದ ನೀರನ್ನು ಎರಚಾಡಿಕೊಳ್ಳುವ ಹಾಗೂ ತಮಟೆ ಶಬ್ದ ಹಾಗೂ ಚಿತ್ರದ ಹಾಡಿಗೆ ಕುಣಿಯುವ ಮೂಲಕ ಸಂಭ್ರಮಿಸಿದರು. ಹಬ್ಬದ ಹಿನ್ನೆಲೆ ಗ್ರಾಮದ ಪ್ರಮುಖ ವೃತ್ತಗಳಿಗೆ ವಿಶೇಷವಾಗಿ ದೀಪ ಅಲಂಕಾರ ಮಾಡಲಾಯಿತು. ನೀರಿನ ಓಕುಳಿ ಆಡಿದ ಬಳಿಕ ಯುವಕರು ಹಾಗೂ ಗ್ರಾಮಸ್ಥರು ದೇವಿಗೆ ಪೂಜೆ ಸಲ್ಲಿಸಿದರು.