ಚಿಕ್ಕಮಗಳೂರು ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಆಂತರಿಕ ಭರವಸೆ ಕೋಶದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರವನ್ನು ಪ್ರಾಚಾರ್ಯೆ ಡಾ. ಕೆ.ಸಿ.ಚಾಂದಿನಿ ಉದ್ಘಾಟಿಸಿದರು. ಪ್ರೊ. ಡಾ. ಅಗಲ್ಯಾ, ಲಕ್ಷ್ಮೀಕಾಂತ್, ಡಾ. ಎಸ್.ಇ.ನಟರಾಜ್, ಡಾ. ಕಲಾವತಿ ಇತರರಿದ್ದರು. 
ನ್ಯೂಸ್

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಪಾಲನೆ ಮಾಡಿ

ಜಿ. ಗಜೇಂದ್ರ

ಚಿಕ್ಕಮಗಳೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಪಾಲನೆಗೆ ನಿರಂತರ ಪರಿಶ್ರಮ ಅಗತ್ಯ ಎಂದು ಐಡಿಎಸ್‌ಜಿ ಸರ್ಕಾರಿ ಕಾಲೇಜು ಪ್ರಾಚಾರ್ಯೆ ಡಾ. ಕೆ.ಸಿ.ಚಾಂದಿನಿ ಅಭಿಪ್ರಾಯಪಟ್ಟರು.
ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗ ಜಂಟಿ ನಿರ್ದೇಶಕರ ಕಚೇರಿ ಸಹಭಾಗಿತ್ವದಲ್ಲಿ ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಆಂತರಿಕ ಭರವಸೆ ಕೋಶದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಎನ್‌ಐಆರ್‌ಎಫ್ ರಚನೆಗೊಂಡು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತಂತೆ ವಿಚಾರಸಂಕಿರಣದಲ್ಲಿ ಚರ್ಚಿಸಲಿದೆ ಎಂದು ಹೇಳಿದರು.
ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ‌್ಯಾಂಕಿಂಗ್ ಕೌನ್ಸಿಲ್ ವಿಶೇಷ ಅಧಿಕಾರಿ ಡಾ. ವಿದ್ಯಾ ಮರಿಯಾ ಜೋಸೆಫ್ ಮಾತನಾಡಿ, ಮೂಲಸೌಕರ್ಯ ಕಲ್ಪಿಸುವುದರೊಂದಿಗೆ ಉತ್ತಮ ಶಿಕ್ಷಣ ಎಲ್ಲರಿಗೂ ಸಿಗಬೇಕು. ಉನ್ನತ ಶಿಕ್ಷಣದ ಅಗತ್ಯಗಳನ್ನು ಪೂರೈಸುವಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶನ ಹಾಗೂ ನಿರ್ದೇಶನ ನೀಡಲು ನ್ಯಾಕ್ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಪ್ರತಿ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಐದು ವರ್ಷಕ್ಕೊಮ್ಮೆ ನ್ಯಾಕ್ ತಂಡ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿಯ ಸೌಲಭ್ಯ, ಬೋಧನೆ ಮತ್ತು ಕಲಿಕೆ ಕುರಿತಂತೆ ವಿವಿಧ ಹಂತದಲ್ಲಿ ಮಾಪನ ಮಾಡಿ ಗ್ರೇಡ್ ನೀಡುತ್ತದೆ. ಉನ್ನತೀಕರಣ ಹಾಗೂ ಶೈಕ್ಷಣಿಕ ಮಟ್ಟ ಸುಧಾರಣೆಗೆ ಶಿಫಾರಸು ಮಾಡಲಿದೆ ಎಂದರು.
ಇಥಿಯೋಪಿಯಾ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಎನ್.ವೆಟ್ರಿವೆಲ್ ಮತ್ತು ಬೆಂಗಳೂರಿನ ಎನ್‌ಎಚ್‌ಸಿಎಇ ಪ್ರೊ. ಡಾ. ಅಗಲ್ಯಾ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಲಕ್ಷ್ಮೀಕಾಂತ್, ಪ್ರಾಧ್ಯಾಪಕರಾದ ಡಾ. ಎಸ್.ಇ.ನಟರಾಜ್, ಡಾ. ಕಲಾವತಿ, ಡಾ. ಕೆ.ಎಂ.ಜಗದೀಶ್, ಪುಷ್ಪಾ ಇತರರಿದ್ದರು.