ಭದ್ರಾವತಿ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಚಂದ್ರಯಾನ-3 ಸಾಧನೆ ಕಾರ್ಯಕ್ರಮದಲ್ಲಿ ಕೆ.ಅನಿಲ್ಕುಮಾರ್, ವಿನುತಾ ದಂಪತಿಯನ್ನು ಸನ್ಮಾನಿಸಲಾಯಿತು. ಡಿ.ಮಂಜುನಾಥ್, ಬಿ.ಕೆ.ಜಗನ್ನಾಥ್ ಇತರರಿದ್ದರು. 
ನ್ಯೂಸ್

ಚಂದ್ರಯಾನದಲ್ಲಿ ವಿಕ್ರಮ್ ಲ್ಯಾಂಡರ್ ಪಾತ್ರ ಮಹತ್ವದ್ದು

ಭದ್ರಾವತಿ: ಚಂದ್ರಯಾನ-3 ಅದ್ಭುತ ಸಾಧನೆ. ಅದರಲ್ಲೂ ಈ ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಪಾತ್ರ ಮುಖ್ಯವಾಗಿದೆ ಎಂದು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಉಪ ಯೋಜನಾ ನಿರ್ದೇಶಕ ಕೆ.ಅನಿಲ್ಕುಮಾರ್ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆಯಿಂದ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಭೂಮಿಯಿಂದ ಯಾವುದೇ ಗ್ರಹದ ಕಕ್ಷೆಗೆ ಉಪಗ್ರಹ ಸೇರಿಸಲು ಹಾಗೂ ಕಾರ್ಯಾಚರಣೆ ಮಾಡಲು ಲ್ಯಾಂಡರ್ ಪಾತ್ರ ಬಹಳ ಮುಖ್ಯ. ಭೂಮಿಯ ಗುರುತ್ವಾಕರ್ಷಣ ಹಾಗೂ ಭೂಮಿಯಿಂದ ಇತರ ಗ್ರಹಗಳ ದೂರ ಮತ್ತು ಆ ಗ್ರಹಗಳ ವಿಸ್ತೀರ್ಣ ಮತ್ತು ಗುಣಲಕ್ಷಣಗಳನ್ನು ಸರಿಯಾಗಿ ಅಧ್ಯಯನ ಮಾಡಿ ಲ್ಯಾಂಡರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಕಾರ್ಯವೈಖರಿ ಅದ್ಭುತವಾಗಿದೆ ಎಂದರು.
ಶಿವಮೊಗ್ಗದ ಖಗೋಳ ತಜ್ಞ ಡಾ. ಶೇಖರ್ ಗೌಳೇರ್ ಮಾತನಾಡಿ, ನಮ್ಮೆಲ್ಲರಿಗೂ ಭವಿಷ್ಯದಲ್ಲಿ ಚಂದ್ರನ ಅಗತ್ಯತೆ ಅನಿವಾರ್ಯವಾಗಬಹುದು. ಈ ನಿಟ್ಟಿನಲ್ಲಿ ಚಂದ್ರಯಾನ-3 ಸಹಕಾರಿಯಾಗಲಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ದೇಶ ಉತ್ತಮ ಸಾಧನೆ ಮಾಡಿದ್ದು ವಿಶ್ವದ ಗಮನ ಸೆಳೆದಿದೆ ಎಂದರು.
ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ ಮಾತನಾಡಿ, ಮಕ್ಕಳಿಗೆ ಪಠ್ಯೇತರ ವಿಷಯಗಳ ಕುರಿತು ಸಹ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮವನ್ನು ಉದ್ಯಮಿ ಬಿ.ಕೆ.ಜಗನ್ನಾಥ್ ಉದ್ಘಾಟಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಬಿ.ಎಲ್.ರಂಗಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್.ರೇವಣಪ್ಪ ಇತರರಿದ್ದರು.