ಸೊರಬ: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಸಂತೋಷದ ವಿಷಯ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ಮಹಾರಥೋತ್ಸವ ಅಂಗವಾಗಿ ಶ್ರೀ ದೇವಿಯ ದರ್ಶನ ಪಡೆದು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಅಧಿಕಾರದ ಅವಧಿಯಲ್ಲಿಯಲ್ಲಿ ಚಂದ್ರಗುತ್ತಿಯ ಅಭಿವೃದ್ಧಿಗೆ ವಿವಿಧ ಮೂಲಗಳಿಂದ ಅನುದಾನ ಕ್ರೂಢಿಕರಿಸಿ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೆ. ಪ್ರಾಧಿಕಾರದ ರಚನೆ ಮಾತ್ರ ಸಲ್ಲದು. ಅದನ್ನು ಕಾರ್ಯಗತಗೊಳಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯಬೇಕು. ಇಚ್ಛಾಶಕ್ತಿ ಮತ್ತು ಕಾರ್ಯಬದ್ಧತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ಚಂದ್ರಗುತ್ತಿಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕೆಲ ತೊಡಕುಗಳಿವೆ. ಪ್ರಾಚ್ಯವಸ್ತು ಇಲಾಖೆ, ಮುಜರಾಯಿ ಇಲಾಖೆ, ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶಗಳಿವೆ. ಇಲ್ಲವನ್ನೂ ನಿವಾರಣೆ ಮಾಡಬೇಕಾದ ಕಾರ್ಯವನ್ನು ಪ್ರಾಧಿಕಾರದ ಅಧಿಕಾರಿಗಳು ಮಾಡಬೇಕಾದ ಹೊಣೆ ಇರುತ್ತದೆ. ಮುಖ್ಯವಾಗಿ ಅಧಿಕಾರಿಗಳು ಅಸಕ್ತಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಸಚಿವರಾದವರು ಆದೇಶ ಮಾಡಬಹುದು. ಆದರೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇರಬೇಕಾಗುತ್ತದೆ. ಪ್ರಾಧಿಕಾರದಿಂದ ಅಭಿವೃದ್ಧಿಗೆ ಹಣವನ್ನು ಒದಗಿಸುವ ಮತ್ತು ಅದನ್ನು ಸದ್ಭಳಕೆ ಮಾಡಿಕೊಳ್ಳಲು ದೇವಸ್ಥಾನದ ಸುತ್ತಲಿನ ಕಾನೂನು ತೊಡಕುಗಳು ಮೊದಲು ನಿವಾರಣೆಯಾಗಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಮಧ್ಯಮ ವರ್ಗದವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿಲ್ಲ. ರೈತರು, ಸಣ್ಣ ಕೈಗಾರಿಕೆ, ಅತಿ ಸಣ್ಣ ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕೆಗಳು ದೇಶಕ್ಕೆ ಸಂಪತ್ತನ್ನು ಉತ್ಪಾದಿಸಿ ಕೊಡುತ್ತವೆ. ಅವರಿಗೆ ಬಜೆಟ್‌ನಲ್ಲಿ ಯಾವುದೇ ಸೌಲತ್ತು ಒದಗಿಸಿಲ್ಲ ಎಂದು ಆರೋಪಿಸಿದರು.
ಮುಖಂಡರಾದ ಶಿವಕುಮಾರ ಕಡಸೂರು, ರಾಜು ಕೆಂಚಿಕೊಪ್ಪ, ಈಶ್ವರ ಚನ್ನಪಟ್ಟಣ, ರಾಜು ಮಾವಿನಬಳ್ಳಿಕೊಪ್ಪ, ಸುರೇಶ್ ಉದ್ರಿ, ಹರೀಶ್, ಪ್ರಸನ್ನ ಶೇಟ್, ರಾಮಚಂದ್ರ ಚಿಮಣೂರು, ಗಣಪತಿ ಕಪ್ಪಗಳಲೆ ಸೇರಿದಂತೆ ಇತರರು ಇದ್ದರು.