ನ್ಯೂಸ್

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅದರ ಹೊಗೆ ಇಡೀ ಊರನ್ನೇ ಸುತ್ತುವರೆದಿದೆ. ಹೊಗೆಯ ಅಥವಾ ವಿಷಕಾರಿ ಹೊಗೆಯ ಎನ್ನುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು ವಿಲೇವಾರಿ ಘಟಕವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಜನಸ್ಪಂದನಾ ಹಿತರಕ್ಷಣಾ ವೇದಿಕೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೊರವಲಯದಲ್ಲಿರುವ ಹಳೆ ಕೆಸರೆ ಸಮೀಪವಿರುವ ಘನತ್ಯಾಜ್ಯ ಘಟಕದ ಮುಂಭಾಗ ಪ್ರತಿಭಟಿಸಿದ ನೂರೂರು ಜನ ನಗರ ಪಾಲಿಕೆ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕದ ಸಂಭವನೀಯ ಅವಘಡಗಳ ಕುರಿತು ವರ್ಷದ ಹಿಂದೆಯೂ ಮನವಿ ಮಾಡಲಾಯಿತು. ನಗರಪಾಲಿಕೆ ಸುರಕ್ಷಿತ ಕಾರ್ಯಾಚರಣೆಯ ಭರವಸೆ ನೀಡಿತ್ತು. ಆದರೆ, ಈವರೆಗೆ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದಷ್ಟೇ ಇದೇ ರೀತಿಯಾಗಿ ಬಿದ್ದಿದ್ದ ಬೆಂಕಿ ನಂದಿಸಲು ತಿಂಗಳುಗಳ ಕಾಲ ಹಿಡಿಯಿತು. ಇದರಿಂದಾಗಿ ಸ್ಥಳೀಯರು ತೀವ್ರ ಸಮಸ್ಯೆ ಅನುಭವಿಸಿದ್ದರು. ಈಗ ಮತ್ತೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ.

ದಿನಂಪ್ರತಿ ನಗರದಿಂದ ತಂದು ಸುರಿಯುವ ಟನ್ ಗಟ್ಟಲೆ ಕಸದ ರಾಶಿ ಗುಡ್ಡದ ರೀತಿಯಲ್ಲಿ ಬಿದ್ದಿದೆ. ಇದರಿಂದಾಗಿ ಸುತ್ತಮುತ್ತಲ ಜನರ ಆರೋಗ್ಯಕ್ಕೂ ಅಪಾಯ. ಈ ವಿಚಾರವನ್ನು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತ್ಯಾಜ್ಯ ಘಟಕದಲ್ಲಿ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ಇದ್ದುದರಿಂದ ಬೆಂಕಿ ಬಿದ್ದ ತಕ್ಷಣ ಸುತ್ತಮುತ್ತ ಹೊಗೆಯ ಜತೆ ಆವರಿಸಿಕೊಂಡ ಕೆಟ್ಟ ವಾಸನೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಹೊಗೆಯಿಂದ ಸ್ಥಳೀಯರಿಗೆ ಆರೋಗ್ಯ ಸಮಸ್ಯೆಯಾಗುತ್ತಿದೆ. ಕೂಡಲೇ ತ್ಯಾಜ್ಯ ಘಟಕ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಘನತ್ಯಾಜ್ಯ ಘಟಕ ಸ್ಥಳಾಂತರಿಸಬೇಕು ಎಂದು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಪ್ರತಿಬಾರಿ ಬೆಂಕಿ ಹತ್ತಿದಾಗ ಇದೇ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದೇಶ್, ಜನಸ್ಪಂದನಾ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಕಾರ್ಯದರ್ಶಿ ಹಳಸಿಂಗರನ್, ಸಂಘಟನಾ ಕಾರ್ಯದರ್ಶಿ ಜಯಶಂಕರ್, ರಮೇಶ್, ಉಮೇಶ್, ರವಿಶಂಕರ್, ಶಿವಮಲ್ಲು, ಲಲಿತಮ್ಮ, ವಿಜಯ್, ಮಲ್ಲೇಶ್, ಚೇತನ್, ರೇವಣ್ಣ, ಭರತ್ ಮತ್ತಿತರರು ಇದ್ದರು.