ಬೆಳಗಾವಿ: ಹೆಚ್ಚುತ್ತಿರುವ ಬಿಸಿಲ ಬೇಗೆ ಜತೆಗೆ ಹಸಿ ಮೆಣಸಿನಕಾಯಿ ಧಾರಣೆಯೂ ಏರಿಕೆಯಾಗಿದ್ದು, ಸಗಟು, ಚಿಲ್ಲರೆ ತರಕಾರಿ ಮಾರುಕಟ್ಟೆಯಲ್ಲಿನ ದರ ಗ್ರಾಹಕರನ್ನು ದಂಗಾಗಿಸಿದೆ. ಸಾಧಾರಣ ದರ್ಜೆ ಹಸಿ ಮೆಣಸಿಕಾಯಿ ಕೆ.ಜಿ.ಗೆ 80 ರೂ., ಉತ್ತಮ ಗುಣಮಟ್ಟದ ಮೆಣಸಿನಕಾಯಿ ಕೆ.ಜಿ.ಗೆ 120 ರೂ.ನಂತೆ ಮಾರಾಟವಾಗುತ್ತಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಸಿ ಮೆಣಸಿಕಾಯಿ ಉತ್ಪಾದನೆ ಸಂಪೂರ್ಣ ಕುಸಿತ ಕಂಡಿದೆ. ಕೆಲ ರೈತರು ಹಿಂಗಾರಿನಲ್ಲಿ ಹಸಿ ಮೆಣಸಿನಕಾಯಿ ಬೆಳೆದಿಲ್ಲ. ಹಾಗಾಗಿ ಸಗಟು, ಚಿಲ್ಲರೆ ಮಾರುಕಟ್ಟೆಗಳಲ್ಲಿ ದರ ಏರಿಕೆಯಾಗಿರುವುದು ಕೆಜಿಗೆ 45 ರಿಂದ 60 ರೂ. ಇದ್ದ ದರ ಒಂದೇ ವಾರದಲ್ಲಿ ಕೆಜಿಗೆ 100 ರೂ. ಗಡಿ ದಾಟಲು ಪ್ರಮುಖ ಕಾರಣ ಎನ್ನಲಾಗಿದೆ.
ನಾಲ್ಕೈದು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಗಟು ಮಾರುಕಟ್ಟೆಗಳಿಗೆ ಮೆಣಸಿನಕಾಯಿ ಬಾರದಿರುವ ಹಿನ್ನೆಲೆಯಲ್ಲಿ ಮಾರಾಟದಲ್ಲಿ ಶೇ.32 ಕುಸಿತ ಕಂಡಿದೆ. ಅಲ್ಲದೆ, ಮಾರುಕಟ್ಟೆಗಳಲ್ಲಿ ಮೆಣಸಿನಕಾಯಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಪೂರೈಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ದರದಲ್ಲಿ ಏರುಪೇರು ಉಂಟಾಗಿದೆ. ಸದ್ಯ ಪರಿಸ್ಥಿತಿ ಅವಲೋಕಿಸಿದರೆ ಏಪ್ರಿಲ್‌ವರೆಗೆ ಮಾರಾಟ ದರ ಸ್ಥಿರವಾಗಿರುವುದಿಲ್ಲ. ಹೊಸದಾಗಿ ನಾಟಿ ಮಾಡಿರುವ ಬೆಳೆ ಬರುವರೆಗೆ ದರ ಹೆಚ್ಚಾಗಿಯೇ ಇರಲಿದೆ ಎಂದು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯ ವ್ಯಾಪಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ವರ್ಷ 89 ರಿಂದ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ವಾರ್ಷಿಕ 1.90_ರಿಂದ 2.30 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತದೆ. ಎಕರೆಗೆ ಸರಾಸರಿ 7 ರಿಂದ 8 ಕ್ವಿಂಟಾಲ್ ಉತ್ಪಾದನೆ ಬರುತ್ತದೆ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರು ಇತರ ಬೆಳೆ ಜತೆ ಮೆಣಸಿನಕಾಯಿ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ.
ಇನ್ನುಳಿದ ಕಡೆ ಹಸಿಮೆಣಸಿನಕಾಯಿ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. ಆದರೆ, ನಾಲ್ಕೈದು ತಿಂಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಮೆಣಸಿನ ಕಾಯಿ ಗಿಡಗಳಿಗೆ ರೋಗ ತಗುಲಿದ್ದರಿಂದ ಉತ್ಪಾದನೆ ಕುಸಿತವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಸಗಟು ಮಾರುಕಟ್ಟೆಗೆ ಹಸಿ ಮೆಣಸಿನಕಾಯಿ ಬರುವುದು ಸಂಪೂರ್ಣ ಕಡಿಮೆಯಾಗಿದೆ. ಬೆಳಗಾವಿ ಸಗಟು ಮಾರುಕಟ್ಟೆಗೆ ನಿತ್ಯ 50 ಟನ್ ವರೆಗೆ ಮೆಣಸಿನಕಾಯಿ ಬರುತ್ತದೆ. ಆದರೆ, ನಾಲ್ಕೈದು ದಿನಗಳಿಂದ ಕೇವಲ 10 ರಿಂದ 15 ಟನ್ ವರೆಗೆ ಬರುತ್ತಿದೆ. ಹಾಗಾಗಿಯೇ ಕ್ವಿಂಟಾಲ್‌ಗೆ 8 ರಿಂದ 9 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ.| ದಿವಾಕರ ಪಾಟೀಲ, ಅಧ್ಯಕ್ಷ, ಬೆಳಗಾವಿ ಜಿಲ್ಲಾ ತರಕಾರಿ ಸಗಟು ಮಾರುಕಟ್ಟೆ ಸಂಘ
ಹಸಿ ಮೆಣಸಿನಕಾಯಿ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು. ಹಾಗಾಗಿ, ಹಿಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಇಲ್ಲದೆ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಂತೆ ಮೆಣಸಿನಕಾಯಿ ಪೂರೈಕೆಯಾಗುತ್ತಿಲ್ಲ. ಹಾಗಾಗಿ, ದರ ಹೆಚ್ಚಾಗಿದೆ.| ಮಹಾಂತೇಶ ಮುರಗೋಡ, ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ
| ಮಂಜುನಾಥ ಕೋಳಿಗುಡ್ಡ