ಸಾಗರದ ನಗರಸಭೆ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿದರು. ಮಲ್ಲಿಕಾರ್ಜುನ ಹಕ್ರೆ, ಕಾಳಿಂಗ ರಾಜ್, ಸವಿತಾ ವಾಸು, ಅರವಿಂದ ರಾಯ್ಕರ್, ಪ್ರೇಮ ಕುಮಾರ್, ಗೌರಿ ಇತರರಿದ್ದರು. 
ನ್ಯೂಸ್

ಗ್ರಾಮೀಣ ಜನರ ಅಭಿವೃದ್ಧಿಗೆ ಆದ್ಯತೆ

ಸಾಗರ: ಧರ್ಮಸ್ಥಳ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಯೋಜನೆ ವ್ಯಸನಮುಕ್ತ ಹಾಗೂ ಸನ್ಮಾರ್ಗಯುತ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ಗ್ರಾಮೀಣಾಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರ ಹಿರಿದು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಸ್ಮರಣೆ ಮತ್ತು ವ್ಯಸನಮುಕ್ತರ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಜತೆಗೆ ಮದ್ಯವರ್ಜನಾ ಶಿಬಿರಗಳಲ್ಲಿ ಪಾಲ್ಗೊಂಡು ಮದ್ಯದ ಚಟ ಬಿಟ್ಟವರು ಬದುಕನ್ನು ಅತ್ಯಂತ ಸುಂದರಗೊಳಿಸಿಕೊಳ್ಳುವತ್ತ ಗಮನ ಹರಿಸಬೇಕು. ಯೋಜನೆಯ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ಎಂ.ಕೆ.ದಿನೇಶ್ ಮಾತನಾಡಿ, ಗಾಂಧೀಜಿಯವರು ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಂಕಲ್ಪ ಕೈಗೊಂಡಿದ್ದರು. ಡಾ. ವೀರೇಂದ್ರ ಹೆಗ್ಗಡೆಯವರು ಗಾಂಧೀಜಿಯವರ ಕನಸು ನನಸು ಮಾಡಲು ಯೋಜನೆ ಮೂಲಕ ಪ್ರಯತ್ನಶೀಲರಾಗಿದ್ದಾರೆ ಎಂದರು. ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆಯ ಮಲ್ಲಿಕಾರ್ಜುನ ಹಕ್ರೆ, ಕಾಳಿಂಗ ರಾಜ್, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಅರವಿಂದ ರಾಯ್ಕರ್, ಪ್ರೇಮ ಕುಮಾರ್, ಗೌರಿ, ದೇವರಾಜ್ ಕುರುವರಿ, ಕಸ್ತೂರಿ ಸಾಗರ್, ಪ್ರಮೀಳಾ, ಎ.ಸಿ.ಚನ್ನವೀರಪ್ಪ, ದಿನಕರ ಭಾವೆ, ದಯಾನಂದ ಪೂಜಾರಿ, ಕಮಲಾಕ್ಷಿ, ರಾಧಾ ಕೃಷ್ಣಮೂರ್ತಿ ಇತರರಿದ್ದರು.