ಕುಮಟಾ: ತಾಲೂಕಿನ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್ ವಿದ್ಯಾರ್ಥಿಗಳು ಗುರುವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದಿಂದ ಸಾರಿಗೆ ಘಟಕ(ಡಿಪೋ)ಕ್ಕೆ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು ಎಟಿಎಸ್ ಶಿವಾನಂದ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಕರೊನಾ ಲಾಕ್ಡೌನ್ ತೆರವಿನ ಬಳಿಕ ಶಾಲಾ- ಕಾಲೇಜುಗಳು ಪುನರಾರಂಭಗೊಂಡಿದ್ದು, ಶೈಕ್ಷಣಿಕ ಚಟುವಟಿಕೆಗಳು ಸಹಜ ಸ್ಥಿತಿಯತ್ತ ಮರಳುತ್ತಿದೆ. ಗ್ರಾಮೀಣ ಭಾಗದಿಂದ ಲಾಕ್ಡೌನ್ಗೆ ಮೊದಲಿದ್ದಂತೆ ಸಮರ್ಪಕ ಬಸ್ಗಳಿಲ್ಲದೇ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ದಿನವೊಂದಕ್ಕೆ ಬಿಡುತ್ತಿದ್ದ ಬಸ್ ಸಂಖ್ಯೆಯೂ ಕಡಿಮೆಯಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಬರದೇ ಇರುವುದು ಒಂದೆಡೆಯಾದರೆ, ರಶ್ ಮತ್ತಿತರ ಕಾರಣಕ್ಕೆ ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲದೆ ಸಾಗುತ್ತಿದೆ.
ಈ ಕುರಿತು ಅನೇಕ ಬಾರಿ ಮನವಿ ಮಾಡಿದರೂ ಸ್ಪಂದನೆಯಿಲ್ಲ. ಮುಂದಿನ ಒಂದೆರಡು ತಿಂಗಳುಗಳಲ್ಲಿ ವಾರ್ಷಿಕ ಪರೀಕ್ಷೆ ಇರುವುದರಿಂದ ಭವಿಷ್ಯದ ಚಿಂತೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸಮರ್ಪಕ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದರು.
ಮನವಿ ಸ್ವೀಕರಿಸಿದ ಎಟಿಎಸ್ ಶಿವಾನಂದ ನಾಯ್ಕ ಪ್ರತಿಕ್ರಿಯಿಸಿ, ಲಾಕ್ಡೌನ್ಗೂ ಮೊದಲಿನ ವೇಳಾಪಟ್ಟಿಯಂತೆ ಬಸ್ ಸಂಚಾರ ನಡೆಸಲು ಸಾಕಷ್ಟು ಸಿಬ್ಬಂದಿ ಕೊರತೆ ಎದುರಾಗಿದೆ. ಸಾಧ್ಯವಾದಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮಯಕ್ಕೆ ಸರಿಯಾಗಿ ಬಸ್ ವೇಳಾಪಟ್ಟಿ ನಿಗದಿಸಿ ಸಂಚಾರ ಮಾಡಲು ಪ್ರಯತ್ನಿಸುತ್ತೇವೆ. ಉದ್ದೇಶ ಪೂರ್ವಕವಾಗಿ ಚಾಲಕ ಬಸ್ಗಳನ್ನು ನಿಲ್ಲಿಸದೇ ಇದ್ದಲ್ಲಿ ಡಿಪೋಗೆ ಕರೆಮಾಡಿ ಬಸ್ನ ನಂಬರ್ ತಿಳಿಸಿ ದೂರು ನೀಡಬೇಕು. ಒಂದು ವೇಳೆ ಬಸ್ ರಶ್ ಇದ್ದಲ್ಲಿ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಕೂಡ ಅಸಾಧ್ಯವಾಗಿದೆ ಎಂದರು.
ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೀರಾಮ ಹೆಗಡೆ, ಜಿಲ್ಲಾ ಸಹ ಸಂಚಾಲಕ ಗಜೇಂದ್ರ ಪಟಗಾರ, ವೀರೇಂದ್ರ ಗುನಗ, ಸುದೀಪ ಪಟಗಾರ, ಸಂಕೇತ್ ನಾಯ್ಕ, ಸೋನಾಲಿ ನಾಯ್ಕ, ಪಲ್ಲವಿ ಎಸ್ ಆಚಾರಿ, ಮಂಜುನಾಥ ಗೌಡ, ಸಂದೇಶ ನಾಯ್ಕ, ಯುವರಾಜ ನಾಯ್ಕ, ಹೃತ್ವಿಕ ನಾಯ್ಕ, ನಿಖಿಲ ನಾಯ್ಕ, ಸಂಕೇತ್ ಅಂಬಿಗ ಇನ್ನಿತರರು ಇದ್ದರು. ಪಿಎಸ್ಐ ಆನಂದಮೂರ್ತಿ, ಪಿಎಸ್ಐ ಸುಧಾ ಅಘನಾಶಿನಿ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.