ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಮದಡ್ಡಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಿದರು.
ಸೋಮವಾರ ತಮದಡ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಒಟ್ಟು ೧೧೯ ಅರ್ಜಿಗಳು ಬಂದಿದ್ದವು. ಈ ಪೈಕಿ ೯೩ ಅರ್ಜಿಗಳನ್ನು ಸ್ಥಳದಲ್ಲಿ ಇತ್ಯರ್ಥ ಪಡಿಸಲಾಯಿತು. ೨೬ ಅರ್ಜಿಗಳ ಇತ್ಯರ್ಥಕ್ಕೆ ಬಾಕಿ ಉಳಿದಿದ್ದು, ಅವುಗಳನ್ನು ಸಹ ತುರ್ತಾಗಿ ಪರಿಹರಿಸುವ ಕಾರ್ಯ ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಬಾಕಿ ಅರ್ಜಿಗಳಲ್ಲಿ ಗ್ರಾಮ ಪಂಚಾಯಿತಿಗೆ ಸಂಬಂಽಸಿದ್ದು ೬, ಲೋಕೋಪಯೋಗಿ ಇಲಾಖೆ ೧, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೧, ಸಮಾಜ ಕಲ್ಯಾಣ ಇಲಾಖೆ ೨, ಹೆಸ್ಕಾಂ ೧, ಎಸ್‌ಎಲ್‌ಒ ೫, ಕಂದಾಯ ಇಲಾಖೆ ೭ ಹಾಗೂ ಇತರೆ ೩ ಸೇರಿ ೨೬ ಅರ್ಜಿಗಳು ಬಾಕಿ ಉಳಿದಿದ್ದವು. ಕಾರ್ಯಕ್ರಮ ಪೂರ್ವದಲ್ಲಿ ತಾಲೂಕಾ ಮಟ್ಟದ ಅಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಸರ್ವೆ ಮಾಡಿ ಮೌಖಿಕವಾಗಿ ಅಹವಾಲುಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ ಆಧಾರ ವಿಭಾಗಕ್ಕೆ ೫, ಭೂ ಮಾಪನಾ ಇಲಾಖೆಗೆ ೩, ಕೃಷಿ ಇಲಾಖೆಯ ೪ ಅರ್ಜಿಗಳು ಸೇರಿದಂತೆ ಇತರೆ ವಿಷಯಕ್ಕೆ ಸಂಬಂಧಿಸಿದ ಅಹವಾಲುಗಳು ಸ್ವೀಕೃತಗೊಂಡಿದ್ದವು.
ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಉಪವಿಭಾಗಾಧಿಕಾರಿ ಸಂತೋಷ ಕುಲಗೌಡ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.