ಹುಣಸೂರು ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು. ಡಾ.ಎಸ್.ಶ್ರೀಕಾಂತ್, ಪಿ.ಕೆ.ರಾಮು, ವಿಠಲ್ ನಾಣಾಚ್ಚಿ, ಲಕ್ಷ್ಮೀ, ಸಣ್ಣಮ್ಮ, ಕಲ್ಲೂರಯ್ಯ ಇತರರು ಇದ್ದರು.  
ನ್ಯೂಸ್

ಗ್ರಾಮಸಭೆಗೆ ಪರಮಾಧಿಕಾರ ನೀಡಲಿ

ಹುಣಸೂರು: ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತ ಹಕ್ಕಿನಡಿ ಗ್ರಾಮ ಸಭೆಗೆ ಸರ್ಕಾರ ಪರಮಾಧಿಕಾರ ನೀಡಬೇಕೆಂದು ಹಿರಿಯ ಆದಿವಾಸಿ ಮುಖಂಡ ವಿಠಲ್ ನಾಣಾಚ್ಚಿ ಆಗ್ರಹಿಸಿದರು.


ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಆದಿವಾಸಿ ಅಧಿಕಾರ ದಿನ ಮತ್ತು ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಆದಿವಾಸಿ ಪಂಚಾಯಿತಿ ಕಾಯ್ದೆ ಅನ್ವಯ ಆದಿವಾಸಿ ಗ್ರಾಮ ಪಂಚಾಯಿತಿ ರಚಿಸಿ ಒಳಾಡಳಿತಕ್ಕೆ ಅನುಕೂಲ ಮಾಡಿಕೊಡಬೇಕು. ಒಳಮೀಸಲಾತಿ ನೀಡಿ ಶಾಸನ ಸಭೆಗಳಲ್ಲಿ ಹಾಗೂ ಸ್ಥಳೀಯ ಸರ್ಕಾರಗಳ ಆಡಳಿತದಲ್ಲಿ ಆದಿವಾಸಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.


ಅರಣ್ಯ ಹಕ್ಕು ಕಾಯ್ದೆಯನ್ವಯ ಎಲ್ಲ ಅರ್ಜಿದಾರರ ಪ್ರಸ್ತಾವಗಳನ್ನು ಪುರಸ್ಕರಿಸಿ ಅರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಸಂಪನ್ಮೂಲಗಳ ಮೇಲಿನ ಹಕ್ಕು ನೀಡಬೇಕು. ಅಲ್ಲದೆ, ಕಾಡಿನಿಂದ ಹೊರಹಾಕಿರುವ 3418 ಕುಟುಂಬಗಳಿಗೂ ತಲಾ 15 ಲಕ್ಷ ರೂ. ಪುನರ್ವಸತಿ ಪ್ಯಾಕೇಜ್ ಹಾಗೂ ತಲಾ 5 ಎಕರೆ ಭೂಮಿ ನೀಡಿ ಹೈಕೋರ್ಟ್ ಆದೇಶ ಪಾಲಿಸುವ ಮೂಲಕ ಚಾರಿತ್ರಿಕವಾಗಿ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಇದ್ಯಾವುದನ್ನೂ ಮಾಡದೆ ಕೇವಲ ಮೌಖಿಕವಾಗಿ ಆದಿವಾಸಿ ಅಧಿಕಾರ ದಿನಾಚರಣೆಯಂಥ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿರಾರ್ಥಕವೆಂದು ಬೇಸರ ವ್ಯಕ್ತಪಡಿಸಿದರು.


ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ವಿಶ್ವದ ಸರ್ವ ಜನರಿಗೂ ಸ್ವಾತಂತ್ರ್ಯ, ಸಮಾನತೆ ಹಾಗೂ ಸಂಪದ ಅಭಿವೃದ್ಧಿ ಸಾಧ್ಯವಾಗಲೆಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದು, ಆಳುವ ಸರ್ಕಾರಗಳಿಗೆ ಆಗಿಂದಾಗ್ಗೆ ಅವಲೋಕನ ಮಾಡಿಕೊಳ್ಳಲು ಒಂದು ದೊಡ್ಡ ಅವಕಾಶ ಎಂದರು.


ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದಿವಾಸಿ ಹಿರಿಯರಾದ ತರಿಕಲ್ ಹಾಡಿಯ ಸಣ್ಣಯ್ಯ, ಭರತವಾಡಿಯ ಸಣ್ಣಮ್ಮ, ನೇರಳಕುಪ್ಪೆ-ಬಿ ಹಾಡಿ ಕೆಂಪಮ್ಮ, ಭರತವಾಡಿಯ ಲಕ್ಷ್ಮೀ, ಹೆಮ್ಮಿಗೆ ಹಾಡಿಯ ಚಿಕ್ಕರಾಮಯ್ಯ, ಕೊಟ್ಟಿಗೆ ಕಾವಲು ಹಾಡಿಯ ಕಲ್ಲುರಯ್ಯ, ಎ.ಪ್ರಕಾಶ್ ಇತರರು ಇದ್ದರು.