ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ಪರಿಷ್ಕರಣೆ ಮಾಡುವುದೂ ಇಲ್ಲ, ಅವುಗಳನ್ನು ನಿಲ್ಲಿಸುವುದು ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಮ್ಮ ಮುಂದೆ ಅಂತಹ ಯಾವ ಪ್ರಶ್ನೆಗಳೇ ಉದ್ಭವಿಸುವುದಿಲ್ಲ. ಕೆಲವರಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತದೆ. ನಾವು ಕಟ್ಟುತ್ತೇವೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬಸ್ ಟಿಕೆಟ್ ಹಣ ಕೊಡುತ್ತೇವೆ ಎನ್ನುತ್ತಾರೆ ಅದು ಅವರ ಇಚ್ಛೆ. ಆದರೆ, ನಾವು ರಾಜ್ಯದ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಅದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ರಾಜ್ಯದಲ್ಲಿನ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಸಂಬಂಧ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು, ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಇದೆ. ನಮಗೆ ನಮ್ಮ ಪರವಾದ ಅಲೆ ಕಾಣುತ್ತಿದೆ ಎಂದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷವೊಡ್ಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಉಪಚುನಾವಣೆಯಲ್ಲಿ ಯಾರೇ ಅಕ್ರಮ ಮಾಡಿದರು ಚುನಾವಣಾ ಆಯೋಗ ಆ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದರು.
ಮುಡಾದಲ್ಲಿನ 50:50ರ ಅನುಪಾತದದ ನಿವೇಶನ ವಾಪಸ್ ಪಡೆಯುವ ವಿಚಾರವಾಗಿ ಮಾತನಾಡಿ, ಮುಡಾದಲ್ಲಿ ಯಾವೆಲ್ಲಾ ಅಕ್ರಮಗಳು ನಡೆದಿವೆಯೋ ಅವುಗಳ ಬಗ್ಗೆ ತನಿಖೆಯಾಗುತ್ತಿದೆ. ನಿಯಮ ಬಾಹಿರವಾಗಿ ನಿವೇಶನ ಹಂಚಿಕೆಯಾಗಿದ್ದರೆ ಅವು ಕಾನೂನಾತ್ಮಕವಾಗಿ ವಾಪಸ್ ಬರಲೇಬೇಕು. ಈಗ ಯಾವುದು ಅಕ್ರಮ, ಯಾವುದು ಕಾನೂನು ಪ್ರಕಾರ ನಡೆದಿದೆ ಎನ್ನುವುದರ ಪರಿಶೀಲನೆ ಸಾಗಿದೆ. ಅಕ್ರಮ ನಡೆದಿದ್ದರೆ ನಿಶ್ಚಿತವಾಗಿ ಅವು ಕಾನೂನುವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.