ನ್ಯೂಸ್

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆ ಉತ್ತಮ ಸ್ಥಾನ

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಉತ್ತಮ ಸ್ಥಾನದಲ್ಲಿವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.

ಪ್ರತಿ ತಿಂಗಳು ತಾಲೂಕು ಸಮಿತಿ ಸಭೆ ನಡೆಸಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಚಾಮರಾಜನಗರ ವೀಕ್ಷಣೆ ವೇಳೆ ಸೋಲಿಗರ ಕಾಲನಿಗೆ ಗ್ಯಾರಂಟಿ ಅನುಷ್ಠಾನ ಆಗಿರಲಿಲ್ಲ. ಬಳಿಕ ಎಲ್ಲರಿಗೂ ಅದನ್ನು ತಲುಪವಂತೆ ಮಾಡಲಾಯಿತು. ತಾಲೂಕು ಸಮಿತಿ ಮುಂದಿನ ದಿನಗಳಲ್ಲಿ ಗ್ಯಾರಂಟಿ ನಡೆ ಪ್ರತಿ ಮನೆ ಕಡೆ ಎಂದು ಪಂಚಾಯಿತಿ ಹಂತಕ್ಕೂ ತಲುಪುವ ದೊಡ್ಡ ಮಟ್ಟದ ಯೋಜನೆ ರೂಪಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿ ರಚಿಸಿರುವುದಕ್ಕೆ ವಿಪಕ್ಷಗಳ ಆಕ್ಷೇಪ, ಕೆಲವು ಶಾಸಕರಿಂದ ತೀವ್ರ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಲು ಸಮಿತಿಯ ಅವಶ್ಯಕತೆ ಇದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಹಾಗಾಗಿ ಸಮಿತಿಗಳ ಅವಶ್ಯಕತೆ ಇದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ಇರುವುದರಿಂದ ಜನರಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತಿದೆ. ಇಡೀ ರಾಜ್ಯಕ್ಕೆ ಕೇವಲ ಹದಿನೈದು ಜನರ ಸಮಿತಿಯನ್ನು ಮಾತ್ರ ರಚನೆ ಮಾಡಲಾಗಿದೆ. ನಮಗೇನು ಸರ್ಕಾರ ಸಂಬಳ ಕೊಡುತ್ತಿಲ್ಲ. ಕೇವಲ ಗೌರವಧನ ಕೊಡುತ್ತಿದ್ದು, ಬೇರೆ ಯಾವುದೇ ಸವಲತ್ತುಗಳನ್ನು ಕೊಡುತ್ತಿಲ್ಲ. ಗ್ಯಾರಂಟಿ ಸಮಿತಿ ರಚನೆಯಿಂದ ಶಾಸಕರ ಅಧಿಕಾರ ಮೊಟಕಾಗಿಲ್ಲ. ಇದರಿಂದ ಶಾಸಕರಿಗೇ ಅನುಕೂಲವಾಗಿದೆ. ನಾವು ಯಾವುದೇ ಆಸೆ ಆಮಿಷದಿಂದ ಈ ಕೆಲಸ ಮಾಡುತ್ತಿಲ್ಲ ಎಂದರು.

ಕೇವಲ 60 ದಿನ ಕೊಡಿ ಭವಿಷ್ಯ ಬದಲಿಸುತ್ತೇವೆಂದು ಆಡಳಿತಕ್ಕೆ ಬಂದ ಕೇಂದ್ರ ಬಿಜೆಪಿ ಪೆಟ್ರೋಲ್, ಅನಿಲ ದರ ಏರಿಕೆ ಮಾಡಿದೆ. ಯಾವುದೇ ಉದ್ಯೋಗ ಸೃಷ್ಟಿ ಮಾಡದೆ ಜನ ಸಂಕಷ್ಟದಲ್ಲಿದ್ದಾರೆ. ಈಗ ದೇಶದಲ್ಲಿ ಕೈ ಹಿಡಿದಿರುವುದು ಎರಡೇ ಒಂದು ಅನ್ನಭಾಗ್ಯ ಮತ್ತೊಂದು ನರೇಗಾ ಯೋಜನೆಗಳಾಗಿದ್ದು ಅದು ಕಾಂಗ್ರೆಸ್ ಬದುಕು ಕಟ್ಟಿಕೊಡುವ ಯೋಜನೆಗಳಾಗಿವೆ ಎಂದು ಹೇಳಿದರು.

ಗೃಹಲಕ್ಷ್ಮಿ ಹಣ ಮೂರು ತಿಂಗಳಿಂದ ನಿಂತಿತ್ತು, ಈಗ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಇನ್ನೂ ತಾಂತ್ರಿಕ ಸಮಸ್ಯೆಗಳಿಗೂ ಸಮಿತಿ ಪರಿಹಾರ ಕಲ್ಪಿಸುತ್ತಿದೆ. ಅರ್ಹರಿದ್ದು, ದಾಖಲೆಗಳು ಸಮಂಜಸವಾಗಿದ್ದರೆ ಅಂತಹವರಿಗೆ ಗ್ಯಾರಂಟಿ ಯೋಜನೆ ತಲುಪದಿರಲು ಅಸಾಧ್ಯ. ಅಂತಹ ಪ್ರಕರಗಳಿದ್ದರೆ ಸಮಿತಿ ಬಗೆಹರಿಸಲಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಅಂಕಿ-ಅಂಶ ಕೊಡುವುದಾಗಿ ಹೇಳಿದರು.

ಎಲ್ಲ ವರ್ಗಕ್ಕೂ ಅನುಕೂಲ:

ಸಿಎಂ ಸಿದ್ದರಾಮಯ್ಯ ಎಲ್ಲ ವರ್ಗಗಳಿಗೂ ಅನುಕೂಲವಾಗುವಂತೆ ಸಮತೋಲಿತ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಅನ್ನು ಪ್ರತಿಪಕ್ಷ ಬಿಜೆಪಿ ನಾಯಕರು ಇದು ಹಲಾಲ್ ಬಜೆಟ್, ಮುಸ್ಲಿಂ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವಲ್ಲ. ಜೈನ, ಸಿಖ್, ಬೌದ್ಧ ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳು ಸೇರಿವೆ. ಆದರೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಜನಪರ ಬಜೆಟ್ ಸಹಿಸಲಾರದೆ ಹೊಟ್ಟೆ ಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.