ನ್ಯೂಸ್

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಬೇಡ: ಸಂತ ಸಮಾವೇಶದಲ್ಲಿ ಸ್ವಾಮೀಜಿಗಳ ಆಗ್ರಹ

ಬೆಂಗಳೂರು: ಪ್ರಸ್ತುತ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದೆ ಅದನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಅನುಷ್ಠಾನಕ್ಕೆ ತರುವಂತೆ ಬೆಂಗಳೂರಿನಲ್ಲಿ ನಡೆದ ‘ಸಂತ ಸಮಾವೇಶ’ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ವಿಶ್ವ ಹಿಂದು ಪರಿಷತ್ ಬೆಂಗಳೂರು ಮಹಾನಗರ ಘಟಕ ಮಲ್ಲೇಶ್ವರದ ಶ್ರೀ ಯತಿರಾಜ ಮಠದ ಆವರಣದ ಶ್ರೀ ರಾಮಾನುಜ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂತ ಸಮಾವೇಶ’ದಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳ ಸಮ್ಮುಖದಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗೋ ಹತ್ಯೆ ಆಗದಂತೆ ಸರ್ವಸಮ್ಮತ ಸಂಸ್ಕೃತಿ ಚಾಲ್ತಿಯಲ್ಲಿತ್ತು. ಆ ಸಂದರ್ಭದಲ್ಲಿ ದನ ಕರುಗಳ ವಧೆಗೆ ಅವಕಾಶ ಇರಲಿಲ್ಲ. ಸ್ವಾತಂತ್ರ್ಯದ ಬಳಿಕ 1948ರಲ್ಲಿ ಗೋಹತ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ, 1964ರಲ್ಲಿ ಕಾಯ್ದೆಯನ್ನು ದುರ್ಬಲಗೊಳಿಸಿ ಎಮ್ಮೆ, ಕೋಣಗಳ ವಧೆಗೆ ಅವಕಾಶ ಮಾಡಿಕೊಟ್ಟರೂ, ಗೋಹತ್ಯೆ ನಿಷೇಧ ಮುಂದುವರಿಯಿತು. 2020ರಲ್ಲಿ ಶಾಸನಸಭೆ ಅಂಗೀಕರಿಸಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಗೋಹತ್ಯೆ ನಿಷೇಧವನ್ನು ಸಂಪೂರ್ಣವಾಗಿ ತಡೆಗಟ್ಟುವಂತಿದೆ. ಈಗಿನ ಸರ್ಕಾರ ಈ ಕಾಯ್ದೆಯನ್ನು ಬದಲಿಸದೆ ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ನಿರ್ಣಯವನ್ನು ಒಪ್ಪಲಾಯಿತು.

ಎರಡನೇ ನಿರ್ಣಯ ಮತಾಂತರ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್‌ಗೆ ಸಂಬಂಧಿಸಿದ ಕರ್ನಾಟಕ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಕಾಯ್ದೆಯನ್ನು ಈಗಿನ ಸರ್ಕಾರ ಬದಲಾಯಿಸಿದೆ. ಇದರಿಂದ ಮತಾಂತರಕ್ಕೆ ಅವಕಾಶ ನೀಡಿದಂತಾಗಿದೆ. ಈ ನಡೆಯಿಂದಾಗಿ ಸಮಾಜದಲ್ಲಿ ಧಾರ್ಮಿಕ ಅಪನಂಬಿಕೆ ಹಾಗೂ ಧರ್ಮಗಳ ಬಗ್ಗೆ ಆರೋಪ, ನಿಂದನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಹೆಸರಿನಲ್ಲಿ ಅನ್ಯ ಕೋಮಿನವು ಆಮಿಷ ಒಡ್ಡಿ ಪ್ರೀತಿಸುವ ನಾಟಕವಾಡಿ ಮದುವೆಯೂ ಆಗಿ ಮತಾಂತರಕ್ಕೆ ಬಳಸಲಾಗುತ್ತಿದೆ. ಆನಂತರ ನಿರ್ದಿಷ್ಟ ಕಾರಣವಿಲ್ಲದೆ ಹೊರಹಾಕುವ ಅಥವಾ ಹತ್ಯೆ ಮಾಡುವ ಕಣ್ಣೀರ ಕಥೆಗಳು ಹೆಚ್ಚುತ್ತಿವೆ. ಹೀಗಾಗಿ ಇತ್ತೀಚಿಗೆ ಬದಲಾಯಿಸಿರುವ ಈ ಕಾಯ್ದೆಯನ್ನು ಮೊದಲಿದ್ದಂತೆ ಪುನರ್‌ಸ್ಥಾಪಿಸಬೇಕು ಎಂದು ಸಂತರು ಒತ್ತಾಯಿಸಿದರು.

ಹೋರಾಟದ ಎಚ್ಚರಿಕೆ:

ಸರ್ಕಾರ ಹಿಂದು ಸಮಾಜದ ಭಾವನೆಗಳಿಗೆ ಮನ್ನಣೆ ನೀಡಬೇಕು. ರಾಜಕೀಯ ಕಾರಣಕ್ಕಾಗಿ ಧರ್ಮ ವಿರೋಧ ನಿಲುವನ್ನು ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಒಂದು ವೇಳೆ ಹಿಂದು ಸಮಾಜಕ್ಕೆ ಘಾಸಿಯಾಗುವಂತಹ ನಿಲುವು ಕೈಗೊಂಡಲ್ಲಿ ಸಂತರೆಲ್ಲರೂ ಜನರೊಟ್ಟಿಗೆ ಪ್ರತಿಭಟಿಸಲು ಉಗ್ರ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಸ್ವಾಮೀಜಿಗಳು ಎಚ್ಚರಿಕೆ ನೀಡಿದರು.

ಸಮಾವೇಶದಲ್ಲಿ ಗೋಕಾಕ್‌ನ ಮಹಾಲಿಂಗೇಶ್ವವರ ಮಠದ ಶ್ರೀ ರವಿಶಂಕರ್ ಶಿವಾಚಾರ್ಯ ಸ್ವಾಮೀಜಿ, ಕೆ.ಆರ್.ಪುರದ ಭಾರತ ಮಾತಾ ಮಂದಿರದ ಸಾಧು ರಂಗರಾಜನ್, ರಾಮಕೃಷ್ಣ ಮಿಷನ್‌ನ ಚಂದ್ರೇಶಾ ನಂದಜೀ, ಗೀತ ಆಶ್ರಮದ ಯೋಗಾನಂದ ಸ್ವಾಮಿ, ಅಜ್ಜಯ್ಯ ಆಶ್ರಮದ ಇ.ಈರಣ್ಣ, ಚಂದಾಪುರದ ಶಾರದ ಆಶ್ರಮದ ಯತೀಶ್ವರಿ ರಾಮ ಪ್ರಿಯಾರಂಬ, ಹಾಯರಹಳ್ಳಿಯ ಆದಿಮುನಿ ಲಿಂಗೇಶ್ವರ ಸಂಸ್ಥಾನದ ನಾಗಲಾಂಬ ಶಿವಾಚಾರ್ಯ, ಧಾರವಾಡದ ಪರಮಾತ್ಮಜೀ ಮಹಾರಾಜ್, ಆರೂಢ ಭಾರತೀ ಸ್ವಾಮೀಜಿ, ದೇವನಹಳ್ಳಿ ಕನ್ನಮಂಗಲದ ನಾರಾಯಣ ಸರಸ್ವತಿ, ಚಿನ್ಮಯ ಮಿಷನ್‌ನ ಅಭಯ ಚೈತನ್ಯ, ಕೆಂಗೇರಿಯ ರಮಣಾನಂದನಾಥ ಸ್ವಾಮೀಜಿ ಮತ್ತಿತರರಿದ್ದರು.

ಗೋಹತ್ಯೆ ನಿಷೇಧಿಸಬೇಕು ಎನ್ನುವುದು ಯಾವುದೇ ರಾಜಕೀಯ ವಿಷಯ ಅಲ್ಲ. ಮತಾಂತರ ನಿಷೇಧವೂ ರಾಜಕೀಯ ವಿಷಯ ಅಲ್ಲವೇ ಅಲ್ಲ. ಈ ಕುರಿತು ಚಾಲ್ತಿಯಲ್ಲಿರುವ ಕಾನೂನನ್ನು ಹಿಂಪಡೆಯಬಾರದು. ಈ ವಿಚಾರದಲ್ಲಿ ಸರ್ಕಾರ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದೆ.

- ಮೇಲುಕೋಟೆ ಯದುಗಿರಿ ಯತಿರಾಜ ಸ್ವಾಮೀಜಿ

ಸಂತರು ಗೋ ಸಂಪತ್ತು ಪರವಾಗಿ ನಿಂತಿದ್ದಾರೆ. ಅವರ ಮಾರ್ಗದರ್ಶನವು ನಮ್ಮ ಸಮಾಜಕ್ಕೆ ಬೇಕಿದೆ. ಇತ್ತೀಚಿನ ದಿನಗಳಲ್ಲಿ ಕುಟುಂಬ ಸಾಮರಸ್ಯ ಹಾಳಾಗುತ್ತಿದ್ದು, ಅದರಿಂದ ಬಾಂಧವ್ಯದಲ್ಲಿ ಬಿರುಕು ಉಂಟಾಗಿದೆ. ಇದರತ್ತ ಹಿಂದುಗಳು ಗಮನಹರಿಸಿ ಕುಟುಂಬ ವ್ಯವಸ್ಥೆಯನ್ನು ಉಳಿಸಿಕೊಂಡಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುವುದಿಲ್ಲ.

- ಬಸವರಾಜ್, ವಿಎಚ್‌ಪಿ ರಾಜ್ಯ ಸಂಚಾಲಕ