ಎಚ್.ಡಿ.ಕೋಟೆ ತಾಲೂಕಿನ ಬೋಚಿಕಟ್ಟೆ ಗ್ರಾಮದ ಚಿತ್ತಧಾಮದಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಗೋ ಮಾತೆಗೆ ಮೈಮುಲ್ ನಿರ್ದೇಶಕರಾದ ಈರೇಗೌಡ, ದ್ರಾಕ್ಷಾಯಿಣಿ ಬಸವರಾಜು ಪೂಜೆ ಸಲ್ಲಿಸಿದರು. 
ನ್ಯೂಸ್

ಗೋವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ

ಎಚ್.ಡಿ.ಕೋಟೆ: ಗೋಮಾತೆ ಮಾನವ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಪ್ರತಿಯೊಬ್ಬ ವ್ಯಕ್ತಿಯು ಗೋವುಗಳ ಪಾಲನೆ ಪೋಷಣೆ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮೈಮುಲ್ ನಿರ್ದೇಶಕ ಈರೇಗೌಡ ತಿಳಿಸಿದರು.

ತಾಲೂಕಿನ ಬೋಚಿಕಟ್ಟೆ ಗ್ರಾಮದ ಚಿತ್ತಧಾಮದಲ್ಲಿ ಹಾಲು ಮಹಾ ಮಂಡಳಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಗೋ ಪೂಜೆ ನೆರವೇರಿಸಿ ಮಾತನಾಡಿದರು. ಗೋವುಗಳ ರಕ್ಷಣೆ ಮಾಡುವುದರಿಂದ ಮುಂಬರುವ ಪೀಳಿಗೆಗೆ ಅತ್ಯಂತ ಅರ್ಥಪೂರ್ಣ ಕೊಡುಗೆ ನೀಡಬಹುದಾಗಿದ್ದು, ಇದರಿಂದ ಮಾನವ ಕಲ್ಯಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಆಚಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ಹಾಗೂ ಅರಿವು ಮೂಡಿಸಲು ಮತ್ತು ಡೇರಿ ಕ್ಷೇತ್ರವನ್ನು ಉತ್ತೇಜಿಸಲು ವಿಶ್ವ ಸಂಸ್ಥೆಯು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ) 2011ರಲ್ಲಿ ವಿಶ್ವ ಹಾಲು ದಿನವನ್ನು ಪ್ರತಿ ವರ್ಷ ಜೂ.1ರಂದು ಆಚರಿಸುವಂತಾಗಿದೆ ಎಂದು ತಿಳಿಸಿದರು.

ಡೇರಿ ಕ್ಷೇತ್ರವು ಜಾಗತಿಕ ಆಹಾರ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದೆ. ಇದು ವಿಶ್ವದಾದ್ಯಂತ ಅನೇಕ ಜನರಿಗೆ ಆರ್ಥಿಕ, ಪೌಷ್ಟಿಕಾಂಶ ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡುತ್ತಿದೆ. ಭಾರತವು ಕೃಷಿ ರಾಷ್ಟ್ರವಾಗಿರುವುದರಿಂದ, ಇದು ದೇಶದ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ ಎಂದರು.

ಹಾಲು ಪೋಷಕಾಂಶಗಳಿಂದ ಕೂಡಿದ ಆಹಾರವಾಗಿದ್ದು, ಹಾಲಿನಿಂದ ಮಾನವ ಶರೀರದ ಬೆಳವಣಿಗೆ ಹಾಗೂ ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಎಲ್ಲ ಪೋಷಕಾಂಶಗಳು ಸಿಗುತ್ತವೆ. ಹಾಲು ಒಂದು ಬಹುಮುಖ್ಯ ಘಟಕಾಂಶವಾಗಿದ್ದು, ಅದನ್ನು ನಿಮ್ಮ ಆಹಾರ ಕ್ರಮದಲ್ಲಿ ಸುಲಭವಾಗಿ ಸೇರಿಸಬಹುದು ಎಂದು ತಿಳಿಸಿದರು.

ಹಾಲಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸಬಹುದು. ಮುಖ್ಯವಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಚೀಸ್, ಪನ್ನೀರ್, ಪೇಡಾ, ಕುಂದ, ಐಸ್‌ಕ್ರೀಂ ಸೇರಿದಂತೆ ಇನ್ನೂ ಅನೇಕ ಪದಾರ್ಥಗಳನ್ನು ಉತ್ಪಾದಿಸಿ, ಅದರ ಪ್ರಯೋಜನ ಪಡೆಯಬಹುದು ಎಂದರು.

ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದರೂ ಸಹ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದ ಜನರಿಗೆ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಭಾರತದಲ್ಲಿ ಹಾಲು ಉತ್ಪಾದಕರಿಗೆ ವ್ಯವಸ್ಥಿತ ಮಾರುಕಟ್ಟೆ ಒದಗಿಸಲಾಗಿದ್ದು ಗುಣಮಟ್ಟದ ಆಧಾರದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.

ಹೈನುಗಾರಿಕೆಯನ್ನು ಕೃಷಿಯಂತೆಯೇ ಪ್ರಮುಖ ಕಸುಬಾಗಿ ನಿರ್ವಹಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಜೀವನೋಪಾಯಕ್ಕೆ ಹಾಲು ಉತ್ಪಾದನೆಯನ್ನು ಅವಲಂಬಿಸಿದ್ದು, ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿ ತೊಡಗಿಸಿಕೊಳ್ಳಲಾಗುತ್ತಿದೆ. ಇದರ ಪರಿಣಾಮ ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣವಾಗಿದೆ ಎಂದು ತಿಳಿಸಿದರು.

ಹಾಲು ಒಂದು ಸಂಪೂರ್ಣ ಸಮತೋಲನ ಆಹಾರವಾಗಿದ್ದು, ಇದರಲ್ಲಿ ಕೊಬ್ಬು, ಪ್ರೋಟಿನ್, ಸಕ್ಕರೆ ಆಪ(ಔಚ್ಚಠಿಟಛಿ), ವಿವಿಧ ಖನಿಜಾಂಶಗಳು ಹಾಗೂ ಹಲವಾರು ವಿಟಿಮಿನ್‌ಗಳಿದ್ದು ಇದರಿಂದ ಮಾನವ ದೇಹಕ್ಕೆ ಬೇಕಾಗುವ ಎಲ್ಲ ಪೋಷಕಾಂಶಗಳು ಹಾಲಿನಲ್ಲಿದ್ದು, ಪ್ರತಿದಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಚಿತ್ತಧಾಮದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇದೇ ಸಂದರ್ಭದಲ್ಲಿ ಹಾಲು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕಿ ದ್ರಾಕ್ಷಾಯಿಣಿ ಬಸವರಾಜಪ್ಪ, ಪುರಸಭಾ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಪ್ರೇಮ್ ಸಾಗರ್, ಚಿತ್ತಧಾಮ ವ್ಯವಸ್ಥಾಪಕ ಮಾದೇವಸ್ವಾಮಿ, ಮುಖಂಡರಾದ ಬಸವರಾಜಪ್ಪ, ಸೋಮೇಗೌಡ, ಸಣ್ಣಸ್ವಾಮಿ ನಾಯ್ಕ, ದಿನೇಶ್, ಆರಿಫ್ ಇಕ್ಬಾಲ್ ಇದ್ದರು.