ಕೋಲಾರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ನಿರ್ದೇಶಕ ಜಯಸಿಂಹಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್​ ಇದ್ದರು. 
ನ್ಯೂಸ್

ಗೋಲ್ಡನ್​ ಡೇರಿ ನಿಮಾರ್ಣಕ್ಕೆ ಸಹಕರಿಸಿ; ಸುದ್ದಿಗೋಷ್ಠಿಯಲ್ಲಿ ಕೋಮುಲ್​ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಆಗ್ರಹ

ಕೋಲಾರ: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವಿಭಜನೆಗೆ ಸಹಮತವಿದೆ. ಅದರ ಜತೆಯಲ್ಲೇ ಸರ್ಕಾರ ತಡೆಹಿಡಿದಿರುವ ಎಂ.ವಿ.ಕೃಷ್ಣಪ್ಪ ಗೋಲ್ಡನ್​ ಡೇರಿ ಸ್ಥಾಪನೆ ಮತ್ತು ಇತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಕೋಮುಲ್​ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕೂಟ ವಿಭಜನೆಗೆ ವಿರೋಧವಿಲ್ಲ, ಈ ಹಿಂದೆ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದೆವು. ಈಗಾಗಲೇ ಚಿಕ್ಕಬಳ್ಳಾಪುರವನ್ನು ಪ್ರತ್ಯೇಕಗೊಳಿಸಿ ಒಕ್ಕೂಟದ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ. ನೋಂದಣಿ ಸಹ ಮಾಡಿ ಪ್ರತ್ಯೇಕದ ಆದೇಶವನ್ನು ಅಧಿಕೃತವಾಗಿ ಜಾರಿ ಮಾಡಿದ್ದಾರೆ ಎಂದರು.

ಕೋಲಾರ ಒಕ್ಕೂಟದ ವ್ಯಾಪ್ತಿಗೆ 921, ಚಿಕ್ಕಬಳ್ಳಾಪುರದಲ್ಲಿ 975 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಲಾಭ ನಷ್ಟದ ಪಾಲು ಚಿಕ್ಕಬಳ್ಳಾಪುರಕ್ಕೆ ಶೇ.45, ಕೋಲಾರಕ್ಕೆ ಶೇ. 55ರ ಅನುಪಾತದಲ್ಲಿ ನಿಗದಿಪಡಿಸಲಾಗಿದೆ. ಪ್ರಸ್ತುತ ಒಕ್ಕೂಟದಲ್ಲಿ 90 ಕೋಟಿ ರೂ. ಇದ್ದು, ಯಂತ್ರೋಪಕರಣಗಳು, ಆಸ್ತಿಗಳು ವಿಂಗಡಣೆಯಾಗಲಿವೆ. ಇದಕ್ಕೆ ಸಮಿತಿ ಸಹ ರಚನೆಯಾಗಿದ್ದು, ಅದರಲ್ಲಿ ನಿರ್ದೇಶಕರಾದ ಜಯಸಿಂಹ, ಕಾಡೇನಹಳ್ಳಿ ನಾಗರಾಜ್​ ಸಹ ಇದ್ದಾರೆ ಎಂದರು.

1987ರಲ್ಲಿ ಜಿಲ್ಲೆ ವಿಭಜನೆಯಾಯಿತು. ಚಿಕ್ಕಬಳ್ಳಾಪುರಕ್ಕೆ 220 ಕೋಟಿ ರೂ. ವೆಚ್ಚದ ಮೆಗಾಡೇರಿ ಯೋಜನೆಗೆ ಅನುಮೋದಿಸಲಾಯಿತು. ಕ್ಯಾಟ್​ಫೀಡ್​ಗೆ 110 ಕೋಟಿ ರೂ. ಮಂಜೂರು ನೀಡಲಾಗಿದೆ. 3 ಶೀತಲ ಕೇಂದ್ರಗಳು ಅಲ್ಲಿವೆ. ಇಷ್ಟೆಲ್ಲ ಅನುಕೂಲಗಳಿರುವ ಜಿಲ್ಲೆಗೆ ಮೆಗಾ ಡೇರಿ ಸಹ ಸಿಕ್ಕಿದೆ. ಆದರೆ ಎಂ.ವಿ.ಕೆ ಡೇರಿ ಮಾಡಲು ಆಡಳಿತ ಮಂಡಳಿಯಲ್ಲಿ ಸಮ್ಮತಿ ಪಡೆದು, ಭೂಮಿಪೂಜೆ ಮುಗಿಸಿ ಟೆಂಡರ್​ ಕರೆಯಲಾಯಿತು. ಇಷ್ಟಾದ ನಂತರ ಅದಕ್ಕೆ ತಡೆಯೊಡ್ಡಿರುವುದು ಸರಿಯಲ್ಲ. ಸಚಿವ ಡಾ.ಸುಧಾಕರ್​ ಆಶಯದಂತೆ ವಿಭಜನೆಯಾಗಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸರ್ಕಾರದ ಮೇಲೆ ಒತ್ತಡ ತಂದು ಗೋಲ್ಡನ್​ಡೇರಿ ನಿಮಾರ್ಣ ಮಾಡಿಸುತ್ತಾರೆಂಬ ನಂಬಿಕೆ ಇದೆ ಎಂದರು.

ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಮಾತನಾಡಿ, ಅವಿಭಜಿತ ಆಡಳಿತದಲ್ಲಿ ಸೌರ್ಹಾರ್ದದಿಂದ ಇದ್ದೆವು. ಪ್ರತ್ಯೇಕವಾಗಿರುವುದಕ್ಕೆ ಬೇಸರವಿಲ್ಲ. ಹೊಸ ಒಕ್ಕೂಟವೂ ಅಭಿವೃದ್ಧಿ ಹೊಂದಲಿ. ಚಿಕ್ಕಬಳ್ಳಾಪುರ ಭಾಗದಲ್ಲಿ ಕೋಲಾರಕ್ಕಿಂತ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ ಎಂದರು.

ನಿರ್ದೇಶಕ ಕಾಡೇನಹಳ್ಳಿ ನಾಗರಾಜ್​ ಮಾತನಾಡಿ, ಮದರ್​ ಡೇರಿಯಿಂದ 1987ರಲ್ಲಿ ಕೋಲಾರ ವಿಭಜನೆಗೊಂಡಾಗ ಅವಿಭಜಿತ ಜಿಲ್ಲೆಯಲ್ಲಿ ಹಾಲಿನ ಉತ್ಪನ್ನ ಒಂದು ಲಕ್ಷ ಲೀಟರ್​ ಮಾತ್ರವಿತ್ತು. ಆಗ ಒಕ್ಕೂಟದ ಕಚೇರಿ ಕೋಲಾರದ ಗೌರಿಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದು, ಪ್ರಸ್ತುತ ಸಾವಿರಾರು ಕೋಟಿ ಆಸ್ತಿ ಹೊಂದಿದೆ ಎಂದರು.

ಕೋಮುಲ್​ ನಿರ್ದೇಶಕ ಹನುಮೇಶ್​, ಕಾಂತಮ್ಮ ಇದ್ದರು.