ಕೋಲಾರ: ಕೋಲಾರ ಹಾಲು ಸಹಕಾರ ಸಂಘಗಳ ಒಕ್ಕೂಟದ (ಕೋಮುಲ್) ನಿರ್ದೇಶಕರ ಸ್ಥಾನಗಳ ಚುನಾವಣೆಯು ಬುಧವಾರ ಸಣ್ಣಪುಟ್ಟ ಗೊಂದಲಗಳ ಮಧ್ಯೆ ನಗರದ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಸುಗಮವಾಗಿ ನಡೆಯಿತು.
ಕಣದಲ್ಲಿದ್ದ ಅಭ್ಯರ್ಥಿಗಳು ಮತದಾರರನ್ನು ಮತಗಟ್ಟೆಗೆ ಕರೆತರುವುದು, ಅವರನ್ನು ಪೊಲೀಸರು ಪರಿಶೀಲಿಸಿ ಮತ ಚಲಾವಣೆಗೆ ಕಳುಹಿಸಿಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆ 9 ಗಂಟೆಯಿಂದ ಶುರುವಾರ ಮತದಾನ ಮಧ್ಯಾಹ್ನ 4 ಗಂಟೆ ತನಕ ನಡೆಯಿತು. ಒಟ್ಟು 855 ಮತದಾರರ ಪೈಕಿ 854 ಮತಗಳು ಚಲಾವಣೆಯಾಗಿದ್ದು, ಒಬ್ಬರು ಗೈರಾಗಿದ್ದರು. ಶೇ.99.88 ರಷ್ಟು ಮತದಾನವಾಗಿದೆ.
13 ಚುನಾಯಿತ ನಿರ್ದೇಶಕರ ಸ್ಥಾನಗಳ ಪೈಕಿ ಟೇಕಲ್ ಕ್ಷೇತ್ರದ ಅಭ್ಯರ್ಥಿ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, 12 ಸ್ಥಾನಕ್ಕೆ ಮತದಾನ ನಡೆಯಿತು. 29 ಮಂದಿ ಅಭ್ಯರ್ಥಿಗಳ ಪರವಾಗಿ 854 ಪ್ರತಿನಿಧಿಗಳು ಮತ ಚಲಾಯಿಸಿದರು. ಮತದಾರರನ್ನು ಸೆಳೆಯಲು ಕೇರಳ, ಗೋವಾ, ಹೈದ್ರಾಬಾದ್, ತಮಿಳುನಾಡಿಗೆ ಪ್ರವಾಸ ಕರೆದೊಯ್ದಿದ್ದರು. ಜತೆಗೆ ನಗದು, ಉಡುಗೊರೆಗಳ ಆಮಿಷ ನೀಡಿ ಅವರನ್ನು ನೇರವಾಗಿ ಮತಗಟ್ಟೆಗೆ ಕರೆದುಕೊಂಡು ಬಂದು ಮತ ಪಡೆದುಕೊಂಡರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಒಕ್ಕೂಟದ ಮಾಜಿ ನಿರ್ದೇಕಶರು, ಹೊಸಬರು ಸ್ಪರ್ಧೆ ಮಾಡಿದ್ದು, ಪಕ್ಷದ ಶಾಸಕರು, ಸಂಸದರು, ರಾಜಕೀಯ ಮುಖಂಡರ ನೇತೃತ್ವದಲ್ಲಿ ಮತದಾರರನ್ನು ಕರೆದುಕೊಂಡು ಬರುವ ಮೂಲಕ ಗಮನ ಸೆಳೆದರು. ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೊತ್ತೂರು ಜಿ.ಮಂಜುನಾಥ್, ಸಮೃದ್ಧಿ ಮಂಜುನಾಥ್, ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಪಕ್ಷದ ಬೆಂಬಲಿತರ ಪರವಾಗಿ ಶ್ರಮಿಸಿದರು. ಮತಗಟ್ಟೆ ಸಮೀಪ ಮತ ಯಾಚಿಸಿದರು.
ಮತದಾರರನ್ನು ಮೂರು ಹಂತದಲ್ಲಿ ಪೊಲೀಸರು, ಒಕ್ಕೂಟದ ಅಧಿಕಾರಿಗಳು ಪರಿಶೀಲಿಸಿ ಮತ ಚಲಾವಣೆಗೆ ಕಳುಹಿಸಿಕೊಟ್ಟರು.
ಯಾವುದೇ ರೀತಿಯ ಅಹಿತಕರ ಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಕೋಲಾರ&ಬಂಗಾರಪೇಟೆ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳೊಂದಿಗೆ ಆಗಮಿಸಿದ್ದ ಕಾರ್ಯಕರ್ತರು ಒಳಾಂಗಣ ಕ್ರೀಡಾಂಗಣ ಹಾಗೂ ಕಾಲೇಜು ವೃತ್ತದಲ್ಲಿ ಜಮಾಯಿಸಿದ್ದರು, ಅವರನ್ನು ಪೊಲೀಸರು ಚದುರಿಸಿದರು.
* ಹೇಳಿಕೆ ಪಡೆಯುವ ವಿಚಾರಕ್ಕೆ ವಾಗ್ವಾದ
ಬೆಳಗ್ಗೆ 9 ಗಂಟೆಗೆ ಸರಿಯಾಗಿ ಮತದಾನ ಶುರುವಾಯಿತು. ಆರಂಭದಲ್ಲಿ ಒಬ್ಬೊಬ್ಬರೆ ಮತಗಟ್ಟೆಯ ಬಳಿ ಸುಳಿದರು. ಆನಂತರ ಪ್ರವಾಸಕ್ಕೆ ತೆರಳಿದ್ದವರು, ಐಷಾರಾಮಿ ಬಸ್, ಟಿಟಿ ವಾಹನಗಳಲ್ಲಿ ಆಗಮಿಸಿದರು. ಇದಕ್ಕೆ ಆಯಾ ರಾಜಕೀಯ ಪಕ್ಷಗಳ ಶಾಸಕರು, ಮಾಜಿ ಸಚಿವ, ಸಂಸದ ಸಾಥ್ ನೀಡಿದರು. ಪ್ರವಾಸಕ್ಕೆ ಕರೆದೊಯ್ದಿದ್ದ ಬೂಡದಮಿಟ್ಟೆ ಹಾಲು ಉತ್ಪಾದಕರ ಸಂಘದ ಪ್ರತಿನಿಧಿ ಸುನಂದ, ಗೊಲ್ಲಹಳ್ಳಿ ಸಂಘದ ಪ್ರತಿನಿಧಿ ನೇತ್ರಾವತಿ ಹಾಗೂ ಎಂ.ಕೊತ್ತೂರು ಸಂಘದ ಗೀತಾ ನಾಪತ್ತೆ ಕುರಿತು ಕುಟುಂಬದ ಸದಸ್ಯರು ಬೇತಮಂಗಲ ಹಾಗೂ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಹಿನ್ನೆಲೆ ಮತದಾನ ಮಾಡಲು ಬಂದಿದ್ದ ಮಹಿಳಾ ಮತದಾರರ ಹೇಳಿಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ಶಾಸಕ ನಂಜೇಗೌಡರು, ಪೊಲೀಸರ ಮೇಲೆ ಕೂಗಾಡಿರು. ಪರಿಣಾಮ ನಂಜೇಗೌಡ ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು.
* ಮತದಾರರಿಗೆ ಐಷಾರಾಮಿ ಪ್ರವಾಸ
ಚುನಾವಣೆಯ ದಿನಾಂಕ ಘೋಷಣೆಯಾದಾಗಿನಿಂದ ಅಭ್ಯರ್ಥಿಗಳು ಮತದಾರರನ್ನು ಹಿಡಿದಿಟ್ಟುಕೊಂಡಿದ್ದರು. ನಾಮಪತ್ರ ಸಲ್ಲಿಸಿದ ದಿನದಿಂದಲೇ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು, ಐಷಾರಾಮಿ ಹೋಟೆಲ್, ಬಸ್, ವಿಮಾನಗಳಲ್ಲಿ ಸುತ್ತಾಡಿಸಿ ಮತಗಟ್ಟೆಗೆ ಕರೆ ತಂದರು. ಪ್ರವಾಸದಲ್ಲಿ ಇದ್ದಷ್ಟು ದಿನ ಮತದಾರರ ಡೆಲಿಗೇಟ್ ಾರಂನ್ನು ಅಭ್ಯರ್ಥಿಗಳು ಸುಪರ್ದಿಗೆ ಪಡೆದುಕೊಂಡಿದ್ದರು. ಮತ ಹಾಕಿದ ನಂತರ ಮತದಾರರನ್ನು ಮನೆಗಳಿಗೆ ಕಳುಹಿಸಿಕೊಡಲಾಯಿತು.