ಮೂಡಿಗೆರೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಅಧ್ಯಕ್ಷ ಬಿ.ಎಸ್.ಜಯರಾಮ್, ದಯಾವತಿ ಇದ್ದರು. 
ನ್ಯೂಸ್

ಗೃಹಲಕ್ಷ್ಮಿಯೋಜನೆಯಡಿ 29 ಸಾವಿರ ಫಲಾನುಭವಿಗಳು

ಮೂಡಿಗೆರೆ: ತಾಲೂಕಿನಲ್ಲಿ 29,004 ಗೃಹಲಕ್ಷ್ಮಿ ಫಲಾನುಭವಿಗಳಿದ್ದು ಇದರಲ್ಲಿ 28,491 ಫಲಾನುಭವಿಗಳಿಗೆ ಮಾಸಿಕ 2 ಸಾವಿರ ರೂ. ಸರ್ಕಾರದಿಂದ ಸಂದಾಯವಾಗುತ್ತಿದೆ. ಯೋಜನೆಯಿಂದ ಬಾಕಿ ಉಳಿದ ಎನ್‌ಪಿಸಿಐ 48, ತೆರಿಗೆ ವ್ಯಾಪ್ತಿಗೆ ಸೇರಿದ 132, ತಿದ್ದುಪಡಿ ಹಾಗೂ ಮರಣ ಹೊಂದಿರುವವರ 513 ಪಡಿತರ ಚೀಟಿಯಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಮ್ ತಿಳಿಸಿದರು.

ತಾಪಂನಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮರಣ ಹೊಂದಿರುವ ಗೃಹಲಕ್ಷ್ಮಿಯೋಜನೆಯ ಫಲಾನುಭವಿಗಳ ಕುಟುಂಬದವರು ಬ್ಯಾಂಕಿಗೆ ಮಾಹಿತಿ ನೀಡಿ ಖಾತೆಗೆ ಬಂದಿರುವ ಹಣವನ್ನು ವಾಪಸ್ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯ ಆಹಾರಧಾನ್ಯ ವಿತರಣೆಗೆ ಕ್ರಮವಹಿಸಲಾಗಿದೆ. ಮುಂದಿನ ವಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. 4 ಚಕ್ರ ವಾಹನ ಹೊಂದಿರುವವರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸುವ ಸರ್ಕಾರದ ನಿರ್ಧಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ತಾಲೂಕಿನಲ್ಲಿ ಒಟ್ಟು 22,194 ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಸರ್ಕಾರದಿಂದ ಆಗಸ್ಟ್‌ನಲ್ಲಿ 92 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಸರ್ಕಾರದ ಆದೇಶದಂತೆ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸದಸ್ಯರಾದ ಹೊಸಕೆರೆ ರಮೇಶ್, ಬಿ.ಕೆ.ಜಯಮ್ಮ, ನಾರಾಯಣ, ಸಬ್ಲಿ ಚಂದ್ರಯ್ಯ, ಲೀಲಾವತಿ, ಅರುಣ ಗುತ್ತಿ, ಭರತ್, ದೀಕ್ಷಿತ್ ಹಾಲೂರು, ನವೀನ್ ಕೆಂಜಿಗೆ, ಶ್ರೀನಿವಾಸ್, ಗುರುವಪ್ಪ, ತಾಪಂ ಇಒ ದಯವತಿ, ಜಿಲ್ಲಾ ಉದ್ಯೋಗ ನೋಂದಣಾಧಿಕಾರಿ ಜಯಶ್ರೀ, ಆಹಾರ ಇಲಾಖೆ ಅಧಿಕಾರಿ ಇಂದ್ರೇಶ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶೋಭಾ, ಮೆಸ್ಕಾಂ ಅಧಿಕಾರಿ ಮಂಜುನಾಥ್ ಇತರರಿದ್ದರು.