ಪಿರಿಯಾಪಟ್ಟಣ: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದ ಮಾಜಿ ಕ್ಯಾಪ್ಟನ್, ಗುಂಡೇಟಿನಿಂದ ಗಾಯಗೊಂಡಿದ್ದ ಬಲರಾಮ ಆನೆ ಚೇತರಿಸಿಕೊಂಡಿದೆ.
ಗುಂಡು ತಗಲಿದ್ದರಿಂದ ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್ ಅವರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು ಶನಿವಾರ ಎಂದಿನಂತೆ ಕಾಡಿಗೆ ಮೇಯಲು ತೆರಳಿದೆ ಎಂದು ನಾಗರಹೊಳೆ ವನ್ಯಜೀವಿ ವಲಯದ ಅರಣ್ಯಾ ಧಿಕಾರಿ ರತನ್‌ಕುಮಾರ್ ತಿಳಿಸಿ ದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದ ಲ್ಲಿರುವ ಬಲರಾಮ ಡಿ.15ರಂದು ಕಾಡಿಗೆ ಮೇಯಲು ತೆರಳಿತ್ತು. ಸಂಜೆಯಾದರೂ ಶಿಬಿರಕ್ಕೆ ಹಿಂದಿರುಗದ ಕಾರಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹುಡುಕಾಟ ಪ್ರಾರಂಭಿ ಸಿದಾಗ ಅಂದು ರಾತ್ರಿ ಅಳಲೂರು ಬಳಿಯ ಸುರೇಶ್ ಅವರ ಜಮೀನಿನಲ್ಲಿ ಗುಂಡು ತಗಲಿದ ಸ್ಥಿತಿಯಲ್ಲಿ ಆನೆ ಪತ್ತೆಯಾಗಿತ್ತು. ತಕ್ಷಣ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಕರೆತಂದು ವನ್ಯಜೀವಿ ಪಶುವೈದ್ಯ ಡಾ.ರಮೇಶ್ ಅವರಿಂದ ಚಿಕಿತ್ಸೆ ನೀಡಿ ಆನೆಯ ಮುಂಭಾಗದ ಕಾಲುಗಳಿಗೆ ತಗುಲಿದ್ದ ಕಾಡತೂಸುಗಳನ್ನು ಹೊರತೆಗೆಯಲಾಗಿದೆ. ವನ್ಯಜೀವಿ ಕಾಯ್ದೆ ಅನುಸಾರ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ತನಿಖೆ ಕೈಗೊಂಡು ಆರೋಪಿ ಸುರೇಶ್ ಅವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಒಂಟಿ ನಳಿಕೆ ಕೋವಿ ಹಾಗೂ ಕಾಡತೂಸುಗಳನ್ನು ವಶಪಡಿಸಿಕೊಂಡಿದ್ದಾರೆ. ರಾತ್ರಿ ವೇಳೆ ಜಮೀನಿನಲ್ಲಿದ್ದ ಆನೆಯನ್ನು ಕಂಡು ಕಾಡಾನೆ ಎಂದು ತಿಳಿದು ಸಾಕಾನೆ ಬಲರಾಮನಿಗೆ ಗುಂಡು ಹೊಡೆದೆ ಎಂದು ಆರೋಪಿ ತಪ್ಪು ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ.