ಸುಂಟಿಕೊಪ್ಪ: ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯ ಕಚೇರಿಗಳಿಗೆ ತೆರಳುವ ರಸ್ತೆಯು ಭಾರಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಅದರಲ್ಲೂ ದ್ವಿಚಕ್ರ ಸವಾರರು ಬಿದ್ದು ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
ರಸ್ತೆಯು ಗುಂಡಿಗಳು ದಿನ ನಿತ್ಯ ಕಳೆಯುತ್ತಿದ್ದಂತೆ ದೊಡ್ಡದಾಗುತ್ತಿದ್ದು, ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ಪಾದಚಾರಿಗಳಿಗೂ ಅಪಾಯ ತಪ್ಪಿದಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹೋಬಳಿ ಕೇಂದ್ರವಾಗಿರುವ ಸುಂಟಿಕೊಪ್ಪ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ ನಾಡಕಚೆೇರಿ, ರೈತ ಸಂಪರ್ಕ ಕೇಂದ್ರ ಈ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ನೂರಾರು ಜನ ಈ ಎರಡು ಕಚೇರಿಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ರಸ್ತೆಯು ಏರು ಹಾದಿಯಾಗಿದ್ದು ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ತುಂಬ ಸಮಸ್ಯೆ ತಂದೊಡ್ಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಪ್ರಾಣಪಾಯವಾಗುವ ಎಲ್ಲ ಸಾಧ್ಯತೆಗಳಿದ್ದು ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕು.