ಅಂತರಸಂತೆ: ಎಚ್.ಡಿ.ಕೋಟೆ ತಾಲೂಕು ಅಂತರಸಂತೆ ಸಮೀಪದ ಮಚ್ಚೂರಿನ ಬಳಿ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಜೋಳದ ಕಡ್ಡಿ ತುಂಬಿಸಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನವೊಂದು ರಸ್ತೆಯ ಬದಿಯ ಗುಂಡಿಯನ್ನು ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅದೃಷ್ಟವಶಾತ್ ವಾಹನದಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ. ಈ ಗೂಡ್ಸ್ ವಾಹನದಲ್ಲಿ ಅಂತರಸಂತೆ ಸುತ್ತಮುತ್ತಲಿನ ಜಮೀನುಗಳಲ್ಲಿರುವ ಜೋಳದ ಕಡ್ಡಿಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಈ ಅಪಘಾತವಾಗಿದೆ.
ಅಂತರಸಂತೆಯ ಹತ್ತಿರ ರಸ್ತೆ ತೀರ ಹದಗೆಟ್ಟಿದ್ದು, ರೈತರಿಗೆ ತಮ್ಮ ಸರಕು-ಸಾಗಣೆ ಮಾಡಲು ತೊಂದರೆಯಾಗುತ್ತಿದೆ. ಅಲ್ಲದೇ ರಸ್ತೆ ಹಳ್ಳಕೊಳ್ಳಗಳಿಂದಾಗಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ರಸ್ತೆ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.