ಯಾದಗಿರಿ: ಸರಳ ಹಾಗೂ ಸಜ್ಜನ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದ ಮಲ್ಲಪ್ಪ ಚನ್ನಪ್ಪ ಮನಗೂಳಿ (ಎಂಸಿ ಮನಗೂಳಿ) ಗಿರಿಜಿಲ್ಲೆಯೊಂದಿಗೆ ಬಿಡಿಸಲಾಗದ ನಂಟು ಹೊಂದಿದ್ದರು.
ಮನಗೂಳಿ ಅವರು ರಾಜಕೀಯ ಪ್ರವೇಶಕ್ಕೂ ಮೊದಲು ಸರ್ಕಾರಿ ನೌಕರರಾಗಿದ್ದರು. 1957ರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮ ಸೇವಕ ಹುದ್ದೆಗೆ ನೇಮಕಗೊಂಡ ಅವರು ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಸತತ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಸದಾ ನಗುಮೊಗದಿಂದ ಹಳ್ಳಿ ಜನರ ಹೃದಯ ಗೆದ್ದಿದ್ದ ಮನಗೂಳಿ 60ರ ಕಾಲಘಟ್ಟಲದಲ್ಲೇ ಗ್ರಾಮೀಣಾಭಿವೃದ್ಧಿಯ ಕನಸು ಹೊತ್ತವರು. ಹೀಗಾಗಿಯೇ ಯಾದಗಿರಿಯಿಂದ ಹೆಡಗಿಮದ್ರಾ ಗ್ರಾಮಕ್ಕೆ ಮೊದಲ ಬಾರಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟರು. ಅಲ್ಲದೆ ಗ್ರಾಮದಲ್ಲಿ ಸೀಡ್ ಉತ್ಪಾದನಾ ಕೇಂದ್ರ ನಿರ್ಮಾಣ ಮಾಡುವಲ್ಲಿ ಅವಿತರವಾಗಿ ಶ್ರಮಿಸಿದ್ದರು.
1962ರಲ್ಲಿ ಹೆಡಗಿಮದ್ರಾ ಗ್ರಾಮದಲ್ಲಿ ಸರ್ಕಾರದಿಂದ ಪ್ರಪ್ರಥಮ ಬಾರಿಗೆ ಪ್ರಾಥಮಿಕ ಶಾಲೆ ಆರಂಭಿಸುವಲ್ಲಿ ಮನಗೂಳಿ ಅವರ ಅವಿರತವಾಗಿ ಶ್ರಮಿಸಿದ್ದರಂತೆ. ದಿ. ಎಸ್.ಆರ್.ಕಂಠಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಮನಗೂಳಿ ಕಂಠಿ ಅವರು ಮುಖ್ಯಮಂತ್ರಿಯಾಗಿದ್ದಲೇ ಹೆಡಗಿಮದ್ರಾ ಗ್ರಾಮಕ್ಕೆ ಕರೆಸಿ ಸರ್ಕಾರಿ ಶಾಲೆ ಉದ್ಘಾಟಿಸಿದ್ದರು.
1964ರಲ್ಲಿ ಜೇವರ್ಗಿಗೆ ವರ್ಗಾವಣೆಯಾಗಿ ನಂತರ ತಮ್ಮ ಸ್ವಂತ ಊರು ಸಿಂಧಗಿಯಿಂದ ರಾಜಕೀಯ ಕ್ಷೇತ್ರ ಪಾದಾರ್ಪಣೆ ಮಾಡಿದ್ದು ಈಗ ಇತಿಹಾಸ. ನನ್ನ ಮನೆಯಲ್ಲಿನ ಕೋಣೆಯೊಂದರಲ್ಲಿ ಐದು ವರ್ಷಗಳ ಕಾಲ ಇದ್ದ ಎಂಸಿ ಮನಗೂಳಿ ನನ್ನ ಸಹೋದರನಂತಿದ್ದರು. ಸದಾ ನನ್ನ ಮತ್ತು ಕುಟುಂದ ಬಗ್ಗೆ ಹೆಚ್ಚಿನ ಅಕ್ಕರೆ ಹೊಂದಿದ್ದರು. ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ ಎಂದು ತಮ್ಮ ಮನಗೂಳಿ ಅವರ ಒಟನಾಟ ನೆನೆದ ಹಿರಿಯ ಗಾಂಧಿವಾದಿ ಕಿಶನರಾವ್ ಮಾಲಿ ಪಾಟೀಲ್ ಹೆಡಗಿಮದ್ರಾ `ವಿಜಯವಾಣಿ'ಯೊಂದಿಗೆ ಮಾತನಾಡುವಾಗ ಗದ್ಗದಿತರಾದರು.