ನ್ಯೂಸ್

ಗಿರಿಜನರಿಗೆ ಮನೆ ನಿರ್ಮಿಸಲು ತೊಡಕು

ಎಚ್.ಡಿ.ಕೋಟೆ: ತಾಲೂಕಿನ ಜೇನು ಕುರುಬ ಜನಾಂಗದವರಿಗೆ 775 ಮನೆಗಳು ಮಂಜೂರಾಗಿದ್ದು, ಹುಲಿ ಸಂರಕ್ಷಣಾ ಪ್ರದೇಶದ ಹಾಡಿಗಳಲ್ಲಿ ನಿವೇಶನವಿದೆ. ಆದರೆ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ಸಮಸ್ಯೆ ಎದುರಾಗಿದೆ ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ನಿಸರ್ಗ ಸಂಸ್ಥೆ ಆವರಣದಲ್ಲಿ ಆದಿವಾಸಿ ಸುಸ್ಥಿರ ಅಭಿವೃದ್ಧಿ ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಆದಿವಾಸಿ ಗ್ರಾಮಸಭಾ ಕಾರ್ಯಾಗಾರದಲ್ಲಿ ಆದಿವಾಸಿಗಳ ಸಮಸ್ಯೆ ಕುರಿತು ಮಾತನಾಡಿದರು.
ಜೇನು ಕುರುಬ ಜನಾಂಗಕ್ಕೆ ಸರ್ಕಾರದ ವತಿಯಿಂದ 775 ಮನೆಗಳು ಸಿಸಿಡಿ ಯೋಜನೆಯಡಿ ಮಂಜೂರಾಗಿವೆೆ. ಬೊಮ್ಮಲಾಪುರ ಹಾಡಿಯಲ್ಲಿ ಮನೆ ನಿರ್ಮಾಣಕ್ಕೆ ಜಾಗವನ್ನು ಜಿಪಿಎಸ್ ಮಾಡಿದಾಗ ಸ್ಥಳವು ಹುಲಿ ಸಂರಕ್ಷಿತ ಅರಣ್ಯ ವಲಯ ಎಂದು ಕಂಡು ಬರುತ್ತಿದೆ. ಹೀಗಾಗಿ ಮನೆಗಳನ್ನು ನಿರ್ಮಾಣ ಮಾಡಲು ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿ ಯೋಜನೆಯ ಸಂಯೋಜಕ ಅವಿನಾಶ್ ಮಾತನಾಡಿದರು. ಸೋನಹಳ್ಳಿ ಹಾಡಿಯ ಮಾದೇವಮ್ಮ, ಮೇಟಿಕುಪ್ಪೆ ಹಾಡಿಯ ಗ್ರಾಪಂ ಸದಸ್ಯರಾದ ಕೆಂಚ, ನಿಸರ್ಗ ಸಂಸ್ಥೆಯ ಆದಿವಾಸಿ ಸುಸ್ಥಿರ ಅಭಿವೃದ್ಧಿ ಯೋಜನೆಯ ಗುರುದೇವಾರಾಧ್ಯ, ಮಾರ್ಸಲಿನ್, ಚಿಕ್ಕತಿಮ್ಮನಾಯ್ಕ, ರಾಜು ಚೈಲ್ಡ್ ಲೈನ್-1098 ಯೋಜನೆಯ ಕಾರ್ಯಕರ್ತರಾದ ಕನ್ಯಾಕುಮಾರಿ, ಜ್ಯೋತಿ, ನಿರ್ಮಲಾ, 20 ಹಾಡಿಯ ಮುಖಂಡರು, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.