ತಿ.ನರಸೀಪುರ ತಾಲೂಕು ಅಕ್ಕಿ ಗಿರಣಿದಾರರು ಶನಿವಾರ ತಹಶೀಲ್ದಾರ್ ಸಿ.ಜಿ.ಗೀತಾ ಅವರಿಗೆ ಶನಿವಾರ ಮನವಿ ಸಲ್ಲಿಸಿದರು  
ನ್ಯೂಸ್

ಗಿರಣಿದಾರರ ಸಮಸ್ಯೆ ಬಗೆಹರಿಸುವಂತೆ ಮನವಿ

ತಿ.ನರಸೀಪುರ: ಕೃಷಿ ಮಾರುಕಟ್ಟೆಯಲ್ಲಿನ ಸೌಕರ್ಯ ಬಳಕೆ ವ್ಯಾಪ್ತಿಗೆ ಅಕ್ಕಿ ಗಿರಣಿದಾರರು ಒಳಪಡದ ಹಿನ್ನೆಲೆಯಲ್ಲಿ ಕಾಯ್ದೆ ವ್ಯಾಪ್ತಿಯಿಂದ ಅಕ್ಕಿ ಗಿರಣಿದಾರರನ್ನು ಹೊರತು ಪಡಿಸುವುದರ ಜತೆಗೆ ಗಿರಣಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ತಾಲೂಕು ಅಕ್ಕಿ ಗಿರಣಿದಾರರು ತಹಸೀಲ್ದಾರ್ ಸಿ.ಜಿ.ಗೀತಾ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಉದ್ಯಮಿ ರೇಣುಕಾಪ್ರಸಾದ್(ಮಧು) ಮಾತನಾಡಿ, ರಾಜ್ಯದಲ್ಲಿ ಬೆಳೆಯುವ ಭತ್ತ ಹಾಗೂ ಹೊರರಾಜ್ಯದ ಭತ್ತವನ್ನು ಸರ್ಕಾರ ಎಂಎಸ್‌ಪಿ ದರದಲ್ಲಿ ಖರೀದಿಸಿ ರಾಜ್ಯದ ಗಿರಣಿಗಳಲ್ಲಿ ಸಂಸ್ಕರಿಸುವ ನಿಟ್ಟಿನಲ್ಲಿ ಸಿಎಂಆರ್ ಮಿಲ್ ಪಾಯಿಂಟ್ ಪ್ರಕ್ರಿಯೆಯನ್ನು ಮುಂದುವರಿಸಿದಲ್ಲಿ ಅನ್ನಭಾಗ್ಯ ಯೋಜನೆಗೆ ಸಹಕಾರಿಯಾಗುತ್ತದೆ. ರಾಜ್ಯ ಹಾಗೂ ಜಿಲ್ಲಾ ಹಂತದಲ್ಲಿ ಗಿರಣಿದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗಿದೆ ಎಂದರು.

ಗಿರಣಿದಾರರನ್ನು ಸದರಿ ಕಾಯ್ದೆಯಿಂದ ಹೊರತುಪಡಿಸುವಂತೆ ಹಾಗೂ ಉದ್ದೇಶಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು. ಅಲ್ಲದೆ ಕೈಗಾರಿಕೆಗಳಿಗೆ ಫಿಕ್ಸೆಡ್ ಶುಲ್ಕವನ್ನು 240 ರೂ.ನಿಂದ 350 ರೂ. ಗಳಿಗೆ ಕೆಇಆರ್‌ಸಿ ಏರಿಕೆ ಮಾಡಿದ್ದು, ರೆಕವರಿ ಚಾರ್ಜಸ್ ಸಹ 50 ಪೈಸೆಯಿಂದ 2.50 ರೂ.ಗೆ ಏರಿಕೆಯಾಗಿದೆ. ಇದರಿಂದ ರೈಸ್‌ಮಿಲ್ ಮಾಲೀಕರಿಗೆ ಪ್ರತಿ ತಿಂಗಳು 60 ರಿಂದ 70 ಸಾವಿರ ರೂ. ಹೊರೆ ಬೀಳುತ್ತಿದೆ ಎಂದು ಹೇಳಿದರು.

ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಅಧ್ಯಕ್ಷ ಬಸವನಹಳ್ಳಿ ಬಸವರಾಜು, ಯಾಚೇನಹಳ್ಳಿ ರಮೇಶ್, ದೇವೇಂದ್ರ ಗುಪ್ತ, ಸಮೀವುಲ್ಲಾ ಖಾನ್, ಸಲ್ಮಾನ್ ಖಾನ್, ಸುಧಾಕರ್, ಸುಗಂಧರಾಜು, ಅನಿಲ್, ಸುನಿಲ್, ಸಲ್ಮಾನ್ ಖಾನ್, ಮೂಗೂರು ಮಹೇಶ್, ಮಂಜುನಾಥ್, ಕನಕ ಸುರೇಶ್, ಬಿ.ಟಿ.ಮಹದೇವು,ಯಡದೊರೆ ರವೀಂದ್ರನಾಥ್ ಹಾಜರಿದ್ದರು