ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಆರ್‌ಸಿಸಿ ಮೇಲ್ಭಾಗದಲ್ಲಿ ಹಾಕಿದ್ದ ಶೀಟುಗಳು ಮಳೆ, ಗಾಳಿಗೆ ಹಾರಿ ಖಾಸಗಿ ತೋಟಕ್ಕೆ ಹೋಗಿಬಿದ್ದಿದೆ. 
ನ್ಯೂಸ್

ಗಾಳಿ, ಮಳೆಗೆ ವಿವಿಧೆಡೆ ಹಾನಿ

ಬಾಳೆಹೊನ್ನೂರು: ಭಾನುವಾರ ಬಾಳೆಹೊನ್ನೂರು ಸೇರಿದಂತೆ ವಿವಿಧೆಡೆ ಸುರಿದ ಗಾಳಿಮಳೆಗೆ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದೆೆ. ಮಧ್ಯಾಹ್ನ 2ಕ್ಕೆ ಗುಡುಗು, ಗಾಳಿಸಹಿತ ಆರಂಭಗೊಂಡ ಭಾರಿ ಮಳೆ ಒಂದು ತಾಸಿಗೂ ಅಧಿಕ ಕಾಲ ಸುರಿಯಿತು. ಗಾಳಿಯ ರಭಸಕ್ಕೆ ರಂಭಾಪುರಿ ಪೀಠದ ಶ್ರೀ ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಆರ್‌ಸಿಸಿ ಮೇಲ್ಭಾಗದಲ್ಲಿ ಹಾಕಿದ್ದ ಶೀಟುಗಳು ಹಾರಿಹೋಗಿ ಮತ್ತೊಂದು ಬದಿಯ ಖಾಸಗಿ ತೋಟಕ್ಕೆ ಹೋಗಿಬಿದ್ದಿದೆ.

ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಮಂದಿರ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಸ್ಥಾನದ ಮೇಲ್ಛಾವಣಿಯ 300ಕ್ಕೂ ಅಧಿಕ ಹೆಂಚುಗಳು ಗಾಳಿಗೆ ಸಿಲುಕಿ ಹಾರಿಹೋಗಿದೆ. ಅರಳೀಕೊಪ್ಪ ಸಮೀಪದ ಕೋಣೆಮನೆ ಎಂಬಲ್ಲಿ ಬೃಹತ್ ಗಾತ್ರದ ಮರ ಉರುಳಿ ಹತ್ತಾರು ವಿದ್ಯುತ್ ಕಂಬಗಳು ಬಿದ್ದಿವೆ. ರಂಭಾಪುರಿ, ಮೆಣಸುಕೊಡಿಗೆ, ಸೀಕೆ, ಮುದುಗುಣಿ, ಸಿಆರ್‌ಎಸ್ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು ಸಂಪರ್ಕ ಕಡಿತಗೊಂಡಿವೆ. ಹಲವು ತೋಟಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಮುಖ್ಯರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.