ನ್ಯೂಸ್

ಗಾಂಧಿ ಮೈದಾನಕ್ಕಾಗಿ ಹೋರಾಟ : ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ

Fight for Gandhi Maidan: Aam Admi Party warns

ಮಡಿಕೇರಿ: ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಮತ್ತು ಸಭೆ, ಸಮಾರಂಭಗಳನ್ನು ನಡೆಸಲು ಯೋಗ್ಯವಾಗಿದ್ದ ನಗರದ ಗಾಂಧಿ ಮೈದಾನ ಇದೀಗ ಅವ್ಯವಸ್ಥೆಗಳಿಂದ ಕೂಡಿದ್ದು, ಜಿಲ್ಲಾಡಳಿತ ತಕ್ಷಣ ಮೈದಾನವನ್ನು ಸುಸ್ಥಿತಿಯಲ್ಲಿಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಘಟಕ ಒತ್ತಾಯಿಸಿದೆ.
ಪಕ್ಷದ ಪ್ರಮುಖರು ಇಂದು ಜಿಲ್ಲಾಡಳಿತ ಮತ್ತು ನಗರಸಭೆಗೆ ಮನವಿ ಪತ್ರ ಸಲ್ಲಿಸಿ ಗಾಂಧಿ ಮೈದಾನದ ಅಂದಗೆಡಿಸಿರುವ ಬಗ್ಗೆ ವಿವರಿಸಿದರು. ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಜಿಲ್ಲಾಡಳಿತ ಇದೇ ಅ.೨ ರಂದು ಗಾಂಧಿ ಜಯಂತಿಯನ್ನು ಗಾಂಧಿ ಮೈದಾನಲ್ಲೇ ಆಚರಿಸಬೇಕು. ತಪ್ಪಿದಲ್ಲಿ ಕ್ರೀಡಾಭಿಮಾನಿಗಳು ಮತ್ತು ನಾಗರೀಕರ ಸಹಕಾರದೊಂದಿಗೆ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಆಪ್ ನ ಕೊಡಗು ಜಿಲ್ಲಾ ಉಸ್ತುವಾರಿ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್ ಹಾಗೂ ಜಿಲ್ಲಾ ಸಂಚಾಲಕ ಹೆಚ್.ಬಿ.ಪ್ರಥ್ವಿ ತಿಳಿಸಿದರು.
ಕಳೆದ ಅನೇಕ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಟವಾಡಿದ ಮೈದಾನ ಇಂದು ಮಣ್ಣಿನ ರಾಶಿ ಹಾಕುವ ಪ್ರದೇಶವಾಗಿ ಮಾರ್ಪಟ್ಟಿರುವುದು ದುರಂತ. ಇದೇ ಮೈದಾನದಲ್ಲಿ ಗಾಂಧಿ ಮಂಟಪ ಮತ್ತು ರಂಗ ಮಂದಿರವೂ ಇದ್ದು, ಯಾವುದಕ್ಕೂ ಗೌರವವಿಲ್ಲದಾಗಿದೆ. ನಗರದಲ್ಲಿ ಮೈದಾನದ ಕೊರತೆ ಕಾಡುತ್ತಿದ್ದು, ಇದರ ನಡುವೆಯೇ ಇರುವ ಮೈದಾನವನ್ನು ಕೂಡ ಹಾಳುಗೆಡವಲಾಗುತ್ತಿದೆ. ಗಾಂಧಿ ಮಂಟಪದ ಬಳಿ ಅವೈಜ್ಞಾನಿಕ ರೂಪದಲ್ಲಿ ಬೇಲಿ ನಿರ್ಮಿಸಿ ಮೈದಾನದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ ಈ ಬೇಲಿ ಹಾಕುವ ಮಂಟಪದ ಅಂದಕ್ಕೆ ದಕ್ಕೆ ತರಲಾಗಿದೆ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕೆಂದು ಮೀಸಲಾಗಿರುವ ಆಟದ ಮೈದಾನದಲ್ಲಿ ಮಣ್ಣಿನ ರಾಶಿ ಹಾಕಿ ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಚಿಣ್ಣಪ್ಪ ವೆಂಕಟೇಶ್ ಹಾಗೂ ಹೆಚ್.ಬಿ.ಪ್ರಥ್ವಿ, ತಕ್ಷಣ ಮಣ್ಣನ್ನು ತೆರವುಗೊಳಿಸಿ ಈ ಮೊದಲಿನಂತೆ ಮೈದಾನವನ್ನು ಸುಸಜ್ಜಿಗೊಳಿಸಬೇಕೆಂದು ಒತ್ತಾಯಿಸಿದರು.
ಗಾಂಧೀಜಿಯ ಹೆಸರನ್ನು ಹೊಂದಿರುವ ಮೈದಾನಕ್ಕೆ ಕಾಯಕಲ್ಪ ನೀಡುವ ಮೂಲಕ ಗಾಂಧಿ ಜಯಂತಿಯಂದು ಮಹಾತ್ಮನಿಗೆ ಗೌರವ ಸಲ್ಲಿಸಬೇಕೆಂದು ಅವರುಗಳು ಮನವಿ ಮಾಡಿದರು.
ಮನವಿ ಸಲ್ಲಿಸುವ ಸಂದರ್ಭ ಪಕ್ಷದ ಮಡಿಕೇರಿ ತಾಲ್ಲೂಕು ಉಸ್ತುವಾರಿ ಹೆಚ್.ಜಿ.ಬಾಲಸುಬ್ರಮಣ್ಯ ಮತ್ತಿತರರು ಹಾಜರಿದ್ದರು.