ಬಾಳೆಹೊನ್ನೂರಿನ ಕಡವಂತಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆಯನ್ನು ಶ್ರೀನಿವಾಸ ವೈ. ಆಲದಾರ್ತಿ ಉದ್ಘಾಟಿಸಿದರು. ವೈ.ಎಂ.ಲಲಿತಾ, ರಂಗನಾಥ, ಕೃಷ್ಣಮೂರ್ತಿ, ಸಹದೇವ್, ಡಾ.ತವಕಲ್ ಇದ್ದರು. 
ನ್ಯೂಸ್

ಗರ್ಭಿಣಿಯರು ಆರೋಗ್ಯ ಕಾಳಜಿ ವಹಿಸಲಿ

ಬಾಳೆಹೊನ್ನೂರು: ಗರ್ಭಿಣಿಯರು, ಬಾಣಂತಿಯರಿಗಾಗಿ ಇರುವ ಪೋಷಣ್ ಅಭಿಯಾನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಹೇಳಿದರು.

ಸಮೀಪದ ಕಡವಂತಿಯ ಸುಜನ ಭವನದಲ್ಲಿ ಜೇನುಗದ್ದೆ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿಯರು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂಬ ಆಶಯದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. ದೇಶಾದ್ಯಂತ ಪೋಷಣ್ ಅಭಿಯಾನವು ಸೆಪ್ಟೆಂಬರ್‌ನಲ್ಲಿ ನಡೆಯುತ್ತಿದೆ. ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ ವೈ.ಆಲದಾರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ, ಕಡವಂತಿ ಗ್ರಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ, ಪಿಡಿಒ ಸಹದೇವ್, ಜೇನುಗದ್ದೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತವಕಲ್ ಇಮ್ರಾನ್, ಪಿಎಸಿಎಸ್ ಉಪಾಧ್ಯಕ್ಷ ಮಹೇಂದ್ರಗೌಡ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಎಂ.ಇ.ಶಾರದಾ, ಅಂಗನವಾಡಿ ಕಾರ್ಯಕರ್ತೆಯರಾದ ವಿಜಯಾ, ನೇತ್ರಾ, ಭಾಗ್ಯಾ, ಲತಾ, ದಿವ್ಯ, ಪ್ರಮುಖರಾದ ಕೆ.ಆರ್.ಅಣ್ಣೇಗೌಡ, ಸುರೇಶ್ ಮತ್ತಿತರರು ಹಾಜರಿದ್ದರು.