ನ್ಯೂಸ್

ಗಮನ ಸೆಳೆಯುತ್ತಿದೆ ಜೈವಿಕ ಇಂಧನ ಮಳಿಗೆ

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಿಸಿರುವ ‘ಜೈವಿಕ ಇಂಧನ ಮಳಿಗೆ’ ಗಮನ ಸೆಳೆಯುತ್ತಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಮಾರ್ಗದರ್ಶನದಲ್ಲಿ ನಿರ್ಮಿಸಿರುವ ಮಳಿಗೆ ಜೈವಿಕ ಇಂಧನ ಕ್ಷೇತ್ರದಲ್ಲಿ ಕೈಗೊಂಡಿರುವ ಕಾರ್ಯ ಯೋಜನೆಗಳು ಹಾಗೂ ಮುಂದಿನ ರೂಪುರೇಷೆ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆಗಳ ಮೂಲಕ ನಾನಾ ಮಾಹಿತಿ ನೀಡುತ್ತಿದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಮಳಿಗೆಯನ್ನು ಉದ್ಘಾಟಿಸಿದರು. ಅವರಿಗೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಸಾಥ್ ನೀಡಿದರು.

ಎಸ್.ಈ.ಸುಧೀಂದ್ರ ಮಾತನಾಡಿ, ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ನೂತನ ಕಾರ್ಯ ಯೋಜನೆಗಳನ್ನು ರೂಪಿಸುತ್ತಿದೆ. ಇತ್ತೀಚಿಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬಯೋಡೀಸೆಲ್ ಮಾರಾಟಕ್ಕೆ ಮಂಡಳಿಯನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಿದೆ. ಮುಕ್ತ ಮಾರಾಟಕ್ಕಾಗಿ ರಿಟೇಲ್ ಔಟ್ಲೆಟ್‌ಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಮಾಡುವ ಕುರಿತು ಆದೇಶ ಹೊರಡಿಸುವುದರೊಂದಿಗೆ ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ ಎಂದು ಹೇಳಿದರು.

ಮೈಸೂರು ನಗರದಲ್ಲಿನ ತ್ಯಾಜ್ಯ ಸಂಗ್ರಹಣೆ, ಜೈವಿಕ ಇಂಧನ ಉತ್ಪಾದನೆ ಹಾಗೂ ವಿತರಣೆ ಕುರಿತು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಬಯೋಡೀಸೆಲ್, ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದಿಸಿ ವಿತರಣೆ ಕುರಿತು ಕಾರ್ಯ ಯೋಜನೆ ರೂಪಿಸಬಹುದಾಗಿದೆ ಎಂದು ತಿಳಿಸಿದರು.

ಇನ್ನು ಕೆಲವೇ ತಿಂಗಳಗಳಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆಯಾಗಲಿದ್ದು, ಬಂಡವಾಳ ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಾಣವಾಗುವುದರ ಕುರಿತು ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಜೈವಿಕ ಇಂಧನ ಕ್ಷೇತ್ರದಲ್ಲಿ ವಿವಿಧ ಜೈವಿಕ ಇಂಧನಗಳ ಉತ್ಪಾದನೆಗೆ ಒತ್ತು ನೀಡಲು ಅನುಕೂಲವಾಗುವಂತೆ ಹಲವು ಪ್ರೋತ್ಸಾಹಗಳನ್ನು, ಸಬ್ಸಿಡಿಗಳನ್ನು ನೀಡಲು ಮುಂದಾಗಿರುವುದಾಗಿ ತಿಳಿಸಿದರು.

ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಈ ವಸ್ತುಪ್ರದರ್ಶನದಲ್ಲಿ ಮಂಡಳಿ ಭಾಗಿಯಾಗಿ ಜೈವಿಕ ಇಂಧನ ಕ್ಷೇತ್ರದ ಪೂರ್ಣ ಪರಿಚಯ ಮಾಡಿಕೊಡಲಿದೆ ಎಂದರು.

ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ್, ಹುಣಸೂರು ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಫಯಾಜ್, ಮಂಡಳಿಯ ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್.ಲೋಹಿತ್, ಯೋಜನಾ ಸಲಹೆಗಾರ ಡಾ.ಜಿ.ಎನ್.ದಯಾನಂದ, ಎನ್‌ಐಇ ಕಾಲೇಜಿನ ಬಿಆರ್‌ಐಡಿಸಿ ಕೇಂದ್ರದ ಸಂಯೋಜಕ ಡಾ.ಶ್ಯಾಮ್‌ಸುಂದರ್, ಶಿವಪ್ರಕಾಶ್, ಪ್ರಸಾದ್, ಡೀಡ್ ಸಂಸ್ಥೆಯ ಸಂಚಾಲಕರಾದ ಪ್ರಕಾಶ್ ಇತರರಿದ್ದರು.