ನ್ಯೂಸ್

ಗದಗ: ಐತಹಾಸಿಕ ಲಕ್ಕುಂಡಿ ಉತ್ಸವದಲ್ಲಿ ಕೃಷಿ ಗೋಷ್ಠಿ

ರೈತ ಉತ್ಪಾದಕ ಸಂಸ್ಥೆಗಳನ್ನು ಬೆಳೆಸಿ, ಪ್ರೋತ್ಸಾಹಿಸಿ

ಗದಗ: ರೈತರು ತಮಗೆ ಬೇಕಾದಂತಹ ಕೃಷಿ ಪರಿಕರಗಳನ್ನು‌ ಪಡೆಯಲು ಅನುಕೂಲವಾಗುವಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಬೆಳೆಸಿ ಪ್ರೋತ್ಸಾಹಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ. ಅಶೋಕ ಆಲೂರ ಆಶಯ ವ್ಯಕ್ತ ಪಡಿಸಿದರು.

ಲಕ್ಕುಂಡಿಯ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ರವಿವಾರ ಜರುಗಿದ ಕೃಷಿ ವಿಚಾರ ಗೋಷ್ಠಿಯಲ್ಲಿ ಆಶಯ ನುಡಿಗಳನ್ನು ಆಡುತ್ತಾ ಮಾತನಾಡಿದ ಅವರು ರಾಜ್ಯ ಒಂದು ಸಣ್ಣ ದೇಶ ಇದ್ದ ಹಾಗೆ ಇಲ್ಲಿ ಎಲ್ಲ ರೀತಿಯ ಬೆಳೆ ಬೆಳೆಯಲು ಪೂರಕ ವಾತಾವರಣವಿದೆ ಎಂದರು.

ರಾಜಸ್ಥಾನ ಹೊರತುಪಡಿಸಿದರೆ ರಾಜ್ಯವು ಹೆಚ್ಚು ಒಣ ಬೇಸಾಯ ಹೊಂದಿದ ಪ್ರದೇಶವಾಗಿದ್ದರು ಸಹ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಅತೀ ಜಾಣರಿದ್ದವರನ್ನು ಕೃಷಿ ಮಾಡಿಸಬೇಕು. ನಮ್ಮಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯಂತ ಜಾಣ್ಮೆಯಿಂದ ಬಳಸಿಕೊಳ್ಳಬೇಕು. ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವಂತಹ ಕೃಷಿ‌ ಪದ್ಧತಿಯನ್ನು ಅಳವಡಿಸಿಕೊಳ್ಳಲು‌ ಮುಂದಾಗಬೇಕು.

ಸಣ್ಣ ರೈತರಿಗೆ ಹೈನುಗಾರಿಕೆಯೆ ಮೂಲ ಆದಾಯವಾಗಿದೆ. ದೇಶದ‌ ಪ್ರಧಾನಿಯವರು ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಅನೇಕ ಯೊಜನೆಗಳನ್ನು‌ ಜಾರಿಗೆ ತಂದಿದೆ. ರಾಜ್ಯ ಸರಕಾರವು ರೈತರ ಅಭ್ಯುದಯಕ್ಕೆ ನಾನಾ ಯೋಜನೆಗಳನ್ನು ನೀಡಿ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರಾರಂಭಿಸಲು ಹೆಚ್ಚು ಗಮನಹರಿಸುತ್ತಿದೆ. ಇದರಿಂದಾಗಿ ರೈತರಿಗೆ ಬೇಕಾದಂತಹ ಪರಿಕರಗಳನ್ನು ತಮ್ಮ ಸಂಸ್ಥೆಯ ಮೂಲಕ ಪಡೆದುಕೊಂಡು ಸ್ವಾವಲಂಭಿ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಗದಗ, ಬಾಗಲಕೋಟ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬೆಳೆಯುತ್ತಿದ್ದು ಇವುಗಳ ಶ್ರೇಣಿಕೃತ, ವರ್ಗಿಕೃತ ಮಾಡುವಂತಹ ಸಂಸ್ಥೆಗಳ‌ ಮೂಲಕ ವ್ಯವಹರಿಸಲು‌ ಮುಂದಾಗಬೇಕು.

ಸಮಾಜದಲ್ಲಿರುವಂತಹ ಬೇರೆ ಕಸುಬುಗಳನ್ನು ಮಾಡುತ್ತಿರುವವರು ಒಗ್ಗಟ್ಟಾಗಿದ್ದಾರೆ. ಅದರಂತೆ ರೈತರು ಒಗ್ಗಟ್ಟಾಗಿರಲು ಕರೇ ನೀಡಿದರು. ಈ ವರ್ಷ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಆಚರಿಸಲಾಗುತ್ತಿದೆ. ನಮ್ಮ ಪ್ರದೇಶದಲ್ಲಿ ಬೆಳೆಯುವ ಸಿರಿಧಾನ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು ಇಂತಹ ಉತ್ಪನ್ನಗಳನ್ನು ವಿಶ್ವದೆಲ್ಲೆಡೆ ಪರಿಚಯಿಸಬೇಕಾಗಿದೆ. ಈ ಕುರಿತು ಗ್ರಾಹಕರಲ್ಲಿ ಉಪಯೋಗಗಳ‌ ಕುರಿತು ಜಾಗೃತಿ‌ ಮೂಡಿಸಲು ತಿಳಿಸಿದರು.

ಇಂದು‌ ನಾವು ಹಲವಾರು ತಳಿಗಳನ್ನು ಕಳೆದುಕೊಂಡಿದ್ದು, ಅವುಗಳನ್ನು ಪುನ: ಬೆಳೆಯಲು ಮುಂದಾಗಬೇಕು. ಸಿರಿಧಾನ್ಯಗಳ ಸೇವನೆಯಿಂದ ಅನೇಕ ರೋಗ ರುಜಿನಗಳಿಂದ ದೂರವಿರಬಹುದು.
ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸಲು ಅಧಿಕಾರಿಗಳು‌ ಮುಂದಾಗ ಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮಾಗಡಿಯ ಪ್ರಗತಿಪರ ಕೃಷಿಕರು ಹಾಗೂ ಉಪನ್ಯಾಸಕ ನಾಗರಾಜ ಕುಲಕರ್ಣಿ ಅವರು ಗ್ರಾಮೀಣ ಕೃಷಿಯಲ್ಲಿ ಯುವಕರ ಸಾಧನೆ ಕುರಿತು ಮಾತನಾಡಿ, ವೈಜ್ಞಾನಿಕ ಸಂಶೊದನೆಯಿಂದ ಇಂದು ಗ್ರಾಮೀಣ ಭಾಗದ ಅಡುಗೆ ಮನೆಯೇ ಬದಲಾಗಿದೆ. ಇಂದಿನ ಬದಲಾಗುತ್ತಿರುವ ಜೀವನ ಶೈಲಿಯ ಜೊತೆಗೆ ಆಹಾರ‌ ಪದ್ಧತಿಯೂ ಬದಲಾಗುತ್ತಿದ್ದು ಇದರಿಂದ ಅನೇಕ ರೋಗಗಳನ್ನು ಅಹ್ವಾನಿಸಿ ಕೊಳ್ಳಲಾಗುತ್ತಿದೆ ಎಂದರು.

ರಾಯಚೂರು ಕೃಷಿ ಸಾಧಕರಾದ ಶ್ರೀಮತಿ ಕವಿತಾ ಮಿಶ್ರಾ ಅವರು ಕೃಷಿ ಮತ್ತು ಮಹಿಳೆ ಕುರಿತು ಮಾತನಾಡಿ, ರೈತ ಅಕ್ಕಿ ಬೆಳೆ ಬೆಳೆಯಬೇಕಾದರ 5-6 ತಿಂಗಳುಗಳು ಬೇಕಾಗಬಹುದು. ಆದರೆ ರೈತ ಬೆಳೆದಂತಹ ಬೆಳೆ ಮಾರಾಟದ ಸಮಯದಲ್ಲಿ ಸೂಕ್ತ ದರ ದೊರೆಯುವುದಿಲ್ಲ.‌ ಇದರಿಂದಾಗಿ ರೈತರಿಗೆ ಇಂದು ಉತ್ತಮ ಸ್ಥಾನಮಾನ ದೊರೆಯುತ್ತಿಲ್ಲ. ರೈತರು ಇಂದಿನ ವೈದ್ಯರು ಇಂಜಿನಿಯರಿಂಗಳಿಗಿಂತಲೂ ತುಂಬಾ ಜಾಣರಾಗಿದ್ದಾರೆ. ಏಕ ಬೆಳೆ ಮಾರಕ ಬಹು ಬೆಳೆ ಪೂರಕ ಎಂಬ ಅಂಶಗಳನ್ನು ಗಮನದಲ್ಲಿಟ್ಟು ರೈತರು ಕೃಷಿ ಮಾಡಲು‌‌ ಮುಂದಾಗಬೇಕು. ಅಲ್ಲದೇ ಋತು ಆಧಾರಿತ ಬೆಳೆಗಳನ್ನು ಬೆಳೆಯುವದರ ಮುಲಕ ಆರ್ಥಿಕ ಸ್ವಾವಲಂಭಿಗಳಾಗಬಹುದಾಗಿದೆ‌. ಒಂದು ಬಾಟಲಿ ಬಿಸ್ಲೆರಿ‌ ನೀರಿನ ದರ ನಿಗದಿ‌ಪಡಿಸುವ ಹಕ್ಕು ಸಮಾಜಕ್ಕಿದೆ. ಆದರೆ ರೈತರು ಕಷ್ಟಪಟ್ಟು ಬೆಳೆದಂತಹ ಬೆಳೆಗಳ ದರ ನಿಗದಿಪಡಿಸುವ ಹಕ್ಕನ್ನು ರೈತರಿಗೆ ಇದುವರೆಗೂ ದೊರೆಯದೇ ಇರುವದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಇಂದು ರೈತರು ವ್ಯವಸ್ಥಿತವಾಗಿ ಕೃಷಿ ಮಾಡುವದರ ಮೂಲಕ ಹೆಬ್ಬಟ್ಟು ಒತ್ತುವ ರೈತನು ಕೂಡ ಇಂದು ಕೊಟ್ಯಾಧೀಶನಾಗ ಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಮುಂಡರಗಿಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕøತ ಕೃಷಿ ಸಾಧಕರಾದ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು. ಕೀಶೊರ ಬಾಬು ನಾಗರಕಟ್ಟಿ ವಂದಿಸಿದರು, ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ದತ್ತಣ್ಣ ಜೋಶಿ ನಿರೂಪಿಸಿದರು.