ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಗಡಿಭಾಗಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಅಕ್ರಮ ಗಣಿಗಾರಿಕೆ ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಹಲವು ವರ್ಷಗಳಿಂದಲೂ
ಪ್ರಯತ್ನಿಸುತ್ತಿದ್ದರೂ ಫಲ ನೀಡುತ್ತಿಲ್ಲ.
ಈ ನಡುವೆ ತಾಲೂಕಿನ ಬೂದಿಕೋಟೆ ಹೋಬಳಿ ವ್ಯಾಪ್ತಿಯ ಉಕ್ಕುಂದ ಗ್ರಾಮದ ಬಳಿಯ ಮುತ್ತುರಾಯನಬೆಟ್ಟದಲ್ಲಿ ಪ್ರಭಾವಿಗಳು ಕಟ್ಟಡ ಕಲ್ಲು ಗಣಿಗಾರಿಕೆ ಆರಂಭಿಸಲು ಮುಂದಾಗಿದ್ದಾರೆ. ಗ್ರಾಮದಲ್ಲಿನ ಬೆಟ್ಟದಲ್ಲಿ ಗಣಿಗಾರಿಕೆ ಆರಂಭಿಸುವ ಸಲುವಾಗಿ ಸರ್ವೇ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬಂದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಂದ ದಾರಿಗೆ ಸುಂಕ ಇಲ್ಲದಂತೆ ಹಿಂತಿರುಗಿದ್ದರು. ಈಗ ಪುನಃ ಅಧಿಕಾರಿಗಳು ಬರುತ್ತಾರೆ ಎಂಬ ಮಾಹಿತಿ ಮೇರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ
ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೂದಿಕೋಟೆ ಹೋಬಳಿಯಲ್ಲಿ ಕಲ್ಲುಬಂಡೆಗಳು ಹೆಚ್ಚಾಗಿರುವುದರಿಂದ ಗಣಿಗಾರಿಕೆಗೆ ಹೇಳಿ ಮಾಡಿಸಿದ ಜಾಗ ಎಂದು ತಿಳಿದ ಬಲಾಡ್ಯರು 5 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸಂಬಂಧಪಟ್ಟ ಇಲಾಖೆಗಳಿಗೆ ಅವಕಾಶ ನೀಡಲು 5 ತಿಂಗಳ ಹಿಂದೆ ಕೋರಿದ್ದರು. ಅಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಕಾರಣ ಈಗ 3 ಎಕರೆಗಾದರೂ ಅವಕಾಶ ಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮಸ್ಥರಿಂದ ಹೋರಾಟ: ಉಕ್ಕುಂದ ಗ್ರಾಮದ ಸರ್ವೇ ನಂ. 23ರಲ್ಲಿನ 172.13 ಎಕರೆ ಪ್ರದೇಶದಲ್ಲಿ ಗೋಮಾಳ ಭೂಮಿಯಿದೆ. ಈ ಸರ್ವೇ ನಂಬರ್ನಲ್ಲಿ ದೊಡ್ಡದಾದ ಕಲ್ಲಿನ ಬೆಟ್ಟ ಹಾಗೂ ಸಾಗುವಳಿ ಜಮೀನು ಇದೆ. ಇದೇ ಭೂಮಿಯಲ್ಲಿ ಸೈಯದ್ ಖಯ್ಯೂಂ ಎಂಬುವವರು 5 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಲು ಭೂ ಮಂಜೂರಿಗಾಗಿ ಮನವಿ ಮಾಡಿದ್ದರು. ಗ್ರಾಮಸ್ಥರು ತಿರುಗಿಬಿದ್ದಿರುವುದರಿಂದ ಈಗ ಪುನಃ 3 ಎಕರೆ ನೀಡಲು ಟೋಟಲ್ ಸ್ಟೇಷನ್, ಡಿಜಿಪಿಎಸ್, ಡ್ರೋನ್ ಸರ್ವೇಯರ್ ಅವರೊಂದಿಗೆ ಜಂಟಿ ಮೋಜಿಣಿ ನಡೆಸಿ ವರದಿ ಸಲ್ಲಿಸಲು ಹಿರಿಯ ಭೂ ಭೂಜ್ಞಾನಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಾಲೂಕು ಭೂ ಮಾಪಕರಿಗೆ ಜೂ 6ರಂದು ಸೂಚನೆ ನೀಡಿದ್ದರು. ಆದರೆ ಅಂದು ಗ್ರಾಮಸ್ಥರು ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದ್ದ ಕಾರಣ ಮಾಹಿತಿ ತಿಳಿದು ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಲಿಲ್ಲ. ಈಗ ಮತ್ತೆ ಸರ್ವೇ ನಡೆಸಲು ಮುಂದಾಗಿರುವುದರಿಂದ ಉಕ್ಕುಂದ, ಕೊಂಡನಹಳ್ಳಿ ಸೇರಿ ಇತರ ಗ್ರಾಮಸ್ಥರು ಪ್ರಾಣವನ್ನಾದರೂ ಕೊಡುತ್ತೇವೆ ಇಲ್ಲಿ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ ಎಂದು ಹೋರಾಟ ಮಾಡಲು ಮುಂದಾಗಿದ್ದಾರೆ.
ಬೆಟ್ಟದಲ್ಲಿ ಕಾಡು ಪ್ರಾಣಿಗಳು ವಾಸ: ಬೆಟ್ಟದಲ್ಲಿ ಜಿಂಕೆ, ನವಿಲು, ಮೊಲ ಸೇರಿ ಹಲವು ಬಗೆಯ ಕಾಡು ಪ್ರಾಣಿಗಳಿವೆ. ಬೆಟ್ಟದ ಕೆಳಗೆ ಇರುವ ರಾಟನಕೆರೆಗೆ ಕಾಡು ಪ್ರಾಣಿಗಳು ಬಂದು ನೀರು ಕುಡಿದು ಮತ್ತೆ ಬೆಟ್ಟ ಸೇರಿಕೊಳ್ಳುತ್ತದೆ. ಇಲ್ಲಿ ಗಣಿಕಾರಿಕೆ ಆರಂಭಿಸಿದರೆ ಕಾಡು ಪ್ರಾಣಿಗಳ ಸಂತತಿ ನಶಸಿ ಹೋಗುತ್ತವೆ. ಬೆಟ್ಟದ ಮೇಲೆ ಮುತ್ತುರಾಯನ ದೇವಾಲಯವಿದ್ದು, ಪ್ರತಿ ವರ್ಷ ಸಂಕ್ರಾಂತಿಯಂದು ಸುತ್ತಮುತ್ತಲಿನ ಗ್ರಾಮಗಳ ಜನರು ಸೇರಿ ಜಾತ್ರೆ ನಡೆಸುತ್ತಾರೆ. ಇಂತಹ ಪ್ರದೇಶದಲ್ಲಿ ಗಣಿಗಾರಿಕೆಗೆ ಸರ್ಕಾರ ಅವಕಾಶ ನೀಡಬಾರದು ಎಂಬುದು ಗ್ರಾಮಸ್ಥರ ಒತ್ತಾಯ.
ಮಾರ್ಕಂಡೇಯ ಡ್ಯಾಂಗೂ ಕುತ್ತು: ಕಲ್ಲು ಗಣಿಗಾರಿಕೆ ನಡೆಸಲು ಮುಂದಾಗಿರುವ ಉಕ್ಕುಂದ ಗ್ರಾಮಕ್ಕೂ, ಮಾರ್ಕಂಡೇಯ ಡ್ಯಾಂಗೂ ಒಂದು ಕಿ.ಮೀ ಅಂತರವಿದೆ. ಬೆಟ್ಟದಲ್ಲಿ ಗಣಿಗಾರಿಕೆ ಆರಂಭಿಸಿದರೆ ಮೈಸೂರು ಮಹಾರಾಜರ ಕಾಲದಲ್ಲಿ ನಿಮಿರ್ಸಿರುವ ಡ್ಯಾಂ ಬಿರುಕು ಬಿಡುವ ಸಾಧ್ಯತೆ ಇದೆ.
ಗೋಮಾಳದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬ ನಿಯಮವಿದ್ದರೂ ಅಧಿಕಾರಿಗಳು ಏಕೆ ಇಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲು ಮುಂದಾಗಿದ್ದಾರೆ. ಗಣಿಗಾರಿಗೆಯಿಂದ ಕಾಡು ಪ್ರಾಣಿಗಳು ಸೇರಿ ಅಪಾರ ಪ್ರಮಾಣದ ಬೆಟ್ಟ ಗುಡ್ಡ ಹಾಗೂ ಸಸ್ಯ ಸಂಪತ್ತು ನಾಶವಾಗುತ್ತದೆ. ಗ್ರಾಮಗಳಲ್ಲಿ ನೆಮ್ಮದಿ ಜೀವನ ಸಾಗಿಸಲು ಕಷ್ಟವಾಗಲಿದ್ದು, ಗಣಿಗಾರಿಕೆಗೆ ಅವಕಾಶ ನೀಡಬಾರದು.
ತಿಮ್ಮರಾಯನಾಯಕ, ಮುಖಂಡ, ಉಕ್ಕುಂದ
ಗಣಿಗಾರಿಕೆಯಿಂದ ಮಾರ್ಕಂಡೇಯ ಡ್ಯಾಂಗೆ ತೊಂದರೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಸರ್ವೇ ನಡೆಸಲು ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ರಾವ್ ಹಾಕಲಾಗಿತ್ತು. ಈಗ ಪುನಃ ಗಣಿಗಾರಿಕೆ ನಡೆಸಲು ಸರ್ವೇಗಾಗಿ ಪ್ರಭಾವಿಗಳು ಮುಂದಾಗಿದ್ದು, ಗ್ರಾಮಸ್ಥರೆಲ್ಲಾ ಒಟ್ಟಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಡಿಸಿ ಕಚೇರಿ ಎದುರು ಹೋರಾಟ ಮಾಡುತ್ತೇವೆ.
ಬ್ಯಾಟಪ್ಪ, ಮಾಜಿ ತಾಪಂ ಸದಸ್ಯ ಉಕ್ಕುಂದ
ಗ್ರಾಮ ಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ವರದಿ ಪಡೆದು ಗ್ರಾಮಸ್ಥರಿಗೆ ಅನನುಕೂಲವಾಗದಂತೆ ಹಾಗೂ ಗ್ರಾಮಸ್ಥರ ಅಭಿಪ್ರಾಯ ಮೀರದಂತೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸುತ್ತೇವೆ.
ಎಂ.ದಯಾನಂದ್, ತಹಸೀಲ್ದಾರ್ ಬಂಗಾರಪೇಟೆ