ಶಿರಾಳಕೊಪ್ಪ: ಪತಿ ಹೆಸರಲ್ಲಿ ಬೆಳೆ ಸಾಲ ಬಾಕಿ ಇದೆ ಎಂದು ಹೆಂಡತಿ ಹೆಸರಿಗೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಂದ ಬ್ಯಾಂಕಿಗೆ ಸಂದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಂಡ ಪ್ರಕರಣದಲ್ಲಿ ರೈತಸಂಘ ಪ್ರತಿಭಟನೆ ನಡೆಸಿ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಸೋಮವಾರ ಶಿಕಾರಿಪುರ ಮತ್ತು ಸೊರಬ ತಾಲೂಕಿನ ಹಲವಾರು ರೈತರು ರೈತಸಂಘದ ಅಧ್ಯಕ್ಷ ಜಯಪ್ಪ ಗೌಡ ನೇತೃತ್ವದಲ್ಲಿ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ, ರೈತ ಸಯ್ಯದ್ ಯಾಸೀನ್ ಬೆಳೆ ಸಾಲ ಪಡೆದಿದ್ದು ಆ ಸಾಲಕ್ಕೆ ಹೆಂಡತಿ ರೇಷ್ಮಾ ಅವರನ್ನು ಜಂಟಿಯಾಗಿ ಮಾಡಲಾಗಿದೆ. ಆದ್ದರಿಂದ ಸಾಲಕ್ಕೆ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮ್ಯಾನೇಜರ್ ತಿಳಿಸಿದರು.
ಈ ಹಿಂದೆ ಎರಡು, ಮೂರು ಬಾರಿ ಬ್ಯಾಂಕಿಗೆ ತೆರಳಿ ಮಹಿಳೆಯ ಹಣವನ್ನು ಗಂಡನ ಸಾಲಕ್ಕೆ ಮುಟ್ಟುಗೊಲು ಹಾಕಿಕೊಳ್ಳುವುದು ಬೇಡ. ಮಕ್ಕಳ ಶಿಕ್ಷಣಕ್ಕಾಗಿ ಪಡೆದ ಸಾಲವದು. ಸ್ತ್ರೀಶಕ್ತಿ ಸಂಘದದಿಂದ ಪಡೆದ ಆ ಹಣವನ್ನು ಬ್ಯಾಂಕ್ ಜಮೆ ಮಾಡಿಕೊಂಡರೆ ಸಂಘದ ಇತರ ಸದಸ್ಯೆಯರಿಗೂ ತೊಂದರೆ ಆಗುತ್ತದೆ. ಆದ್ದರಿಂದ ಆ ಹಣವನ್ನು ಮಹಿಳೆಗೆ ಕೊಡಿ. ನಾವು ಬೆಳೆ ಬಂದಾಗ ಸಾಲ ಚುಕ್ತಾ ಮಾಡಿಸುವುದಾಗಿ ಹೇಳಿದಾಗ ಬ್ಯಾಂಕ್‌ನವರು ನಿರಾಕರಿಸಿದ್ದರು. ಆದರೆ ಸೋಮವಾರ ಪ್ರತಿಭಟನೆಗೆ ಆಗಮಿಸಿದ್ದ ರೈತರು ಪ್ರಾರಂಭದಲ್ಲಿ ಘೋಷಣೆ ಕೂಗಿದರು. ನಂತರ ಬ್ಯಾಂಕಿನ ಮುಖ್ಯಕಚೇರಿಯ ಅಧಿಕಾರಿ ಜತೆ ವಿಡಿಯೋ ಸಂಭಾಷಣೆ ಮೂಲಕ ಮಾತುಕತೆ ನಡೆಸಿ ಬೆಳೆ ಬಂದ ನಂತರ ನಾವೇ ರೈತನ ಸಾಲ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದ ಮೇರೆಗೆ ಹಣವನ್ನು ಬ್ಯಾಂಕ್ ಅಧಿಕಾರಿಗಳು ವಾಪಸ್ ನೀಡಿದರು.
ಶಿಕಾರಿಪುರ ತಾಲೂಕು ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಸೊರಬ ತಾಲೂಕು ಅಧ್ಯಕ್ಷ ಹಾಲಪ್ಪ ಗೌಡ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಪುಟ್ಟನ ಗೌಡ, ಕಾರ್ಯದರ್ಶಿ ಕೊಟ್ರೇಶ್, ವೇದಮೂರ್ತಿ, ವಿಜುಗೌಡ, ಶಿರಾಳಕೊಪ್ಪ ರೈತಸಂಘದ ಅಧ್ಯಕ್ಷ ನವೀದ್, ಗಂಗಾಧರ ಶೆಟ್ಟರ್ ಇತರರಿದ್ದರು.