ನ್ಯೂಸ್

ಗಂಟಲ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಹುಬ್ಬಳ್ಳಿ: ಗಂಟಲ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಕೊಲ್ಹಾಪುರ ಮೂಲದ 46 ವರ್ಷದ ಮಹಿಳೆಗೆ ಹುಬ್ಬಳ್ಳಿಯ ಎಚ್​ಸಿಜಿ ಎನ್​ಎಂಆರ್ ಕ್ಯಾನ್ಸರ್ ಕೇಂದ್ರದ ವೈದ್ಯರು, ಉಚಿತ ಜೆಜುನಲ್ ಫ್ಲಾಪ್​ನೊಂದಿಗೆ ಗಂಟಲಕುಳಿಯ ಭಾಗದಲ್ಲಿ ಅಪರೂಪದ ಮರು ನಿರ್ಮಾಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದು ಎಚ್​ಸಿಜಿ ಎನ್​ಎಂಆರ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ರೋಗದ ಶಸ್ತ್ರಚಿಕಿತ್ಸಕ ಡಾ. ರುದ್ರೇಶ ತಬಾಲಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹಿಳೆಯು ಆಹಾರವನ್ನು ನುಂಗಲೂ ಕಷ್ಟಪಡುತ್ತಿದ್ದರು. ಇಲ್ಲಿಗೆ ಆಗಮಿಸಿದ ಮೇಲೆ ಅವರಿಗೆ ಪ್ರಾಥಮಿಕ ಪರೀಕ್ಷೆ ಮಾಡಿದಾಗ ಹೈಪೋಫಾರ್ನೆಕ್ ಕಾರ್ಸಿನೋಮ ಇರುವುದು ಕಂಡುಬಂತು. ಬಳಿಕ ಅವರನ್ನು ಕಿಮೋ ರೆಡಿಯೋಥೆರಪಿಗೆ ಒಳಪಡಿಸಲಾಗಿತ್ತು. ಆ ನಂತರ ಸಿ.ಟಿ. ಸ್ಕ್ಯಾನ್ ಮಾಡಿ, ಟೋಟಲ್ ಲ್ಯಾರಿಂಗೋಫಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು ಎಂದು ತಿಳಿಸಿದರು.

ಹಾನಿಗೊಳಗಾದ ಗಂಟಲಕುಳಿ ತೆಗೆದುಹಾಕಿ ತಾತ್ಕಾಲಿಕ ಧ್ವನಿ ಪೆಟ್ಟಿಗೆ ಅಳವಡಿಸಲಾಗಿದೆ. 20 ದಿನಗಳ ಹಿಂದೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದ್ದು, ಗುಣಮುಖರಾಗಿದ್ದಾರೆ. ಆರು ತಿಂಗಳ ನಂತರ ಈ ರೋಗಿಗೆ ಕೃತಕ ಧ್ವನಿಪೆಟ್ಟಿಗೆ ಅಳವಡಿಸಲಾಗುವುದು ಎಂದರು.

ಆಸ್ಪತ್ರೆಯ ಸಿಇಒ ಡಾ. ಜೈಕಿಶನ್, ಪ್ಲ್ಯಾಸ್ಟಿಕ್ ಶಸ್ತ್ರ ಚಿಕಿತ್ಸಕ ಡಾ. ಕಿಶೋರ ಬಳ್ಳಾರಿ, ಅರಿವಳಿಕೆ ತಜ್ಞೆ ಡಾ. ರಶ್ಮಿ ಸುದ್ದಿಗೋಷ್ಠಿಯಲ್ಲಿದ್ದರು.