ನ್ಯೂಸ್

ಖಾಸಗಿ ಕಾಲೇಜುಗಳು ಆನ್‌ಲೈನ್ ಕ್ಲಾಸ್‌ಗೆ ಒತ್ತು

ಖಾಸಗಿ ಕಾಲೇಜುಗಳು ಆನ್‌ಲೈನ್ ಕ್ಲಾಸ್‌ಗೆ ಒತ್ತು

  • ಬೆಂಗಳೂರು
    ಭೌತಿಕ ತರಗತಿಗಳಿಗೆ ವಿದ್ಯಾರ್ಥಿಗಳ ಆಗಮನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಪದವಿ ಕಾಲೇಜುಗಳು ಮತ್ತೆ ಆನ್‌ಲೈನ್ ಕ್ಲಾಸ್ ಆಯೋಜನೆ ಕಡೆ ಒಲವು ವ್ಯಕ್ತಪಡಿಸಿವೆ.
    ಮೊದಲೆರಡು ದಿನಗಳಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸುವ ಸಂಖ್ಯೆ ಕಡಿಮೆ ಇದ್ದರಿಂದ ಹಾಗೂ ಬಹುತೇಕ ಪಾಲಕರು ಭೌತಿಕ ತರಗತಿಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲವೆಂದು ಕಾಲೇಜು ಆಡಳಿತ ಮಂಡಳಿ ಜತೆಗೆ ಸಂವಹನ ನಡೆಸಿರುವುದರಿಂದ ಕಾಲೇಜುಗಳು ಭೌತಿಕ ತರಗತಿ ಬದಲಾಗಿ ಆನ್‌ಲೈನ್ ತರಗತಿಗಳನ್ನೇ ನಡೆಸಲು ತೀರ್ಮಾನಿಸಿವೆ.
    ನಗರದ ಪ್ರಮುಖ ಕಾಲೇಜುಗಳು ಮೊದಲ ದಿನ ಕಾಲೇಜು ತೆರೆದು ಮರುದಿನವೇ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಿ ಬೋಧಕರಿಂದ ಆನ್‌ಲೈನ್ ಕ್ಲಾಸ್‌ಗಳನ್ನು ನಡೆಸುತ್ತಿದ್ದಾರೆ.
    ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿರುವ ಸಂಖ್ಯೆ ಶೇ.20 ದಾಟುತ್ತಿಲ್ಲ. ಕಾಲೇಜು ಆಡಳಿತ ಮಂಡಳಿಗಳು ಪಾಲಕರೊಂದಿಗೆ ಸುರಕ್ಷತಾ ಕ್ರಮದ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಿಲ್ಲ. ಇದರಿಂದ ಆನ್‌ಲೈನ್ ಪಾಠವೇ ಸೂಕ್ತ ಎಂದು ಕಾಲೇಜು ಆಡಳಿತ ಮಂಡಳಿಗಳು ನಿರ್ಧರಿಸಿವೆ.
    ಇದು ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ನಡೆಸುತ್ತಿರುವ ಸಾಮಾನ್ಯ ಕಾಲೇಜುಗಳ ಪರಿಸ್ಥಿತಿ ಆದರೆ, ಇಂಜಿನಿಯರಿಂಗ್ ಕಾಲೇಜುಗಳು ಕತೆ ಇನ್ನೂ ವಿಭಿನ್ನವಾಗಿವೆ. ನ.17ರಿಂದ ಕಾಲೇಜು ಆರಂಭಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದರೂ, ಇದು ನಮಗೆ ಅನ್ವಯಿಸುವುದಿಲ್ಲವೆಂದು ಖಾಸಗಿ ಇಂಜಿನಿಯರಿಂಗ್ ಕಾಲೇಜಗಳು ಕಾಲೇಜನ್ನು ತೆರೆದೇ ಇಲ್ಲ.
    ಬೆಂ.ವಿವಿ ವ್ಯಾಪ್ತಿಯಲ್ಲಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆ್ ಇಂಜಿನಿಯರಿಂಗ್(ಯುವಿಸಿಇ) ವಿದ್ಯಾರ್ಥಿಗಳ ಪ್ರವೇಶದ ಶೇಕಡವಾರು ಪ್ರಮಾಣ ಶೂನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂ.ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಅವರು ಪಾಲಕರೊಂದಿಗೆ ಆನ್‌ಲೈನ್ ಮೂಲಕ ಸಭೆ ನಡೆಸಿ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.