ನ್ಯೂಸ್

ಖಾಸಗಿ ಎಪಿಎಂಸಿ ಬಂದ್ ಮಾಡುವಂತೆ ಡಿ.16ರಂದು ಹೋರಾಟ

ಬೆಳಗಾವಿ: ಉತ್ತರ ಕರ್ನಾಟಕದ ಜನರ ಹಾಗೂ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನದ ಸದುದ್ದೇಶ ಇಟ್ಟುಕೊಂಡು ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಪ್ರಕಾಶ ನಾಯಕ ಒತ್ತಾಯಿಸಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.9 ರಿಂದ 20ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಈ ವೇಳೆ ಮೋಜು -ಮಸ್ತಿ ಮಾಡದೇ ಅಭಿವೃದ್ಧಿಪರ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಗಾಗಿ ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರಿಗೆ ನ್ಯಾಯ ಕೊಡಿಸಬೇಕು. ಎಪಿಎಂಸಿ ಕಾಯ್ದೆಯನ್ನು ಸದೃಢಗೊಳಿಸಬೇಕು. ಯಾವುದೇ ದಲ್ಲಾಳಿಗಳು ಖರೀದಿಗೆ ಅವಕಾಶ ನೀಡದೇ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯರೇ ಖರೀದಿ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕಾರ್ಯಗಳ ಕೈಗೊಳ್ಳುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಪರಿಣಾಮಕಾರಿಯಾಗಿ ಚರ್ಚೆಗಳು ನಡೆಯಬೇಕು. ಸುವರ್ಣ ವಿಧಾನಸೌಧ ಪೂರ್ಣಾವಧಿಯಲ್ಲಿ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಖಾಸಗಿ ಎಪಿಎಂಸಿ ಬಂದ್ ಮಾಡುವಂತೆ ಚಳಿಗಾಲದ ಅಧಿವೇಶನದ ವೇಳೆ ಡಿ.16ರಂದು ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸರ್ಕಾರ ವಕ್ಫ್ ಮಂಡಳಿ ರದ್ದತಿಗೆ ಕ್ರಮ ಕೈಗೊಳ್ಳಬೇಕು. ರೈತರು, ಕೃಷಿ ವಿರುದ್ಧ ಕಾಯ್ದೆಗಳನ್ನು ಕೈ ಬಿಡಬೇಕು. ರಾಜ್ಯದಲ್ಲಿರುವ ಖಾಸಗಿ ಎಪಿಎಂಸಿ ತೆಗೆಯುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ನಿರ್ಧರಿಸಬೇಕು ಎಂದರು.

ಸಂಘದ ಕಾರ್ಯದರ್ಶಿ ಕಿಷನ್ ನಂದಿ ಸುದ್ದಿಗೋಷ್ಠಿಯಲ್ಲಿದ್ದರು.