ನ್ಯೂಸ್

ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ: ಸಿ.ಎಸ್. ಷಡಕ್ಷರಿ

ವಿಜಯಪುರ: ಸರ್ಕಾರಿ ನೌಕರರ ಮೇಲೆ ಕಾರ್ಯಒತ್ತಡ ಅಧಿಕವಾಗಿದೆ. ರಾಜ್ಯದಲ್ಲಿ 6.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಮಂಜೂರಾಗಿವೆ. ಆದರೆ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಖ್ಯೆ 5.40 ಲಕ್ಷ. ಹೀಗಾಗಿ ಸಹಜವಾಗಿ ಸರ್ಕಾರಿ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ. ಸರ್ಕಾರ ಕೂಡಲೇ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಒತ್ತಾಯಿಸಿದರು.

ಎಲ್ಲ ಇಲಾಖೆಗಳಲ್ಲಿಯೂ ಖಾಲಿ ಹುದ್ದೆಗಳು ಭರ್ತಿಯಾಗಬೇಕಿದೆ. ಸಾಲು ಸಾಲು ಹುದ್ದೆಗಳು ಖಾಲಿ ಇರುವುದರಿಂದಾಗಿ ಸರ್ಕಾರಿ ನೌಕರರ ಮೇಲೆ ಒತ್ತಡ ಅಧಿಕವಾಗಿದೆ, ಪಿಡಿಒ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇವೆ. ಹೀಗಾಗಿ ಅನೇಕ ಕೆಲಸಗಳನ್ನು ಪ್ರಭಾರಿ, ಉಸ್ತುವಾರಿಯನ್ನು ವಹಿಸಿಕೊಳ್ಳಬೇಕಾಗಿರುವುದರಿಂದ ಕೆಲಸದ ಒತ್ತಡ ಅಧಿಕವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೂತನ ಪಿಂಚಣಿ ವ್ಯವಸ್ಥೆ ಸರ್ಕಾರಿ ನೌಕರರಿಗೆ ಮಾರಕವಾಗಿದೆ, 2006 ರ ನಂತರ ನೇಮಕಗೊಂಡ ಎಲ್ಲ ನೌಕರರಿಗೂ ಈ ಪಿಂಚಣಿ ವ್ಯಾಪ್ತಿಗೆ ತರಲಾಗಿದೆ. ಪರಿಣಾಮವಾಗಿ ನಿವೃತ್ತಿ ನಂತರ ಈ ನೌಕರರಿಗೆ 2 ಸಾವಿರ ರೂ. ಸಹ ಪಿಂಚಣಿ ದೊರಕುವುದಿಲ್ಲ. ಇದು ಅವೈಜ್ಞಾನಿಕ ಹಾಗೂ ಅಸಂಬದ್ಧವಾದ ಪಿಂಚಣಿ ಯೋಜನೆಯಾಗಿದೆ. ಬೇರೆ ರಾಜ್ಯಗಳಲ್ಲಿ ಈ ಯೋಜನೆ ತೆಗೆದುಹಾಕಲಾಗಿದೆ. ಹೀಗಾಗಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.
2023ರ ವೇಳೆಗೆ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರಿಗೆ ದೊರಕುವಷ್ಟ ಸಮಾನ ವೇತನ, ಭತ್ಯೆಗಳು ದೊರಕುವಂತಾಗಬೇಕು, ಈ ನಿಟ್ಟಿನಲ್ಲಿ ಸಂಘ, ಸಂಘಟಿತ ಹಾಗೂ ಪ್ರಾಮಾಣಿಕವಾದ ಪ್ರಯತ್ನ ಮಾಡಲಿದೆ ಎಂದರು.

  • ಔರಾದ್ಕರ ವರದಿ ಜಾರಿಯಾಗಲಿ
    ಪೊಲೀಸ್ ಇಲಾಖೆಯ ನೌಕರರು ಸಂಘದ ಕಾರ್ಯಚಟುವಟಿಕೆಗಳಿಗೆ ಮುಂಚೂಣಿಯಲ್ಲಿ ಬರಲು ಸಾಧ್ಯವಿಲ್ಲ, ಆದರೆ ಅವರ ಧ್ವನಿಯಾಗಿ ನಾವು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಪೊಲೀಸರ ಹಿತರಕ್ಷಣೆಯ ದೃಷ್ಟಿಯಿಂದ ಡಾ.ರಾಘವೇಂದ್ರ ಔರಾದ್ಕರ ವರದಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ಬಗ್ಗೆ ಗೃಹ ಸಚಿವರು ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
    ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಕೋಶಾಧ್ಯಕ್ಷ ಜುಬೇರ್ ಕೆರೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ ಇತರರು ಉಪಸ್ಥಿತರಿದ್ದರು.