ನ್ಯೂಸ್

ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳಿಗೆ ಮಣೆ

ಪಾಂಡವಪುರ: ಭತ್ತ, ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಮನ್ನಣೆ ಸಿಗುತ್ತಿಲ್ಲ. ಅಧಿಕಾರಿಗಳು ದಲ್ಲಾಳಿಗಳು ತರುವ ಕಳಪೆ ರಾಗಿ ಖರೀದಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.


ಪಟ್ಟಣದ ಹಾರೋಹಳ್ಳಿ ಸಮೀಪದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ತೆರೆಯಲಾಗಿರುವ ಕೇಂದ್ರದಲ್ಲಿ ರೈತರಿಂದ ಭತ್ತ ಮತ್ತು ರಾಗಿ ಖರೀದಿಸಲಾಗುತ್ತಿದೆ. ಅಧಿಕಾರಿಗಳು ರೈತರ ಪರವಾಗಿರದೆ ದಲ್ಲಾಳಿಗಳ ಪರ ಕೆಲಸ ಮಾಡುತ್ತಿರುವ ಪರಿಣಾಮ ಖರೀದಿ ವಿಳಂಬ ಮಾಡಲಾಗುತ್ತಿದೆ. ಲಾರಿ, ದೊಡ್ಡ ಗೂಡ್ಸ್ ವಾಹನಗಳಲ್ಲಿ ದಲ್ಲಾಳಿಗಳು 100, 200 ಕ್ವಿಂಟಾಲ್ ಭತ್ತ, ರಾಗಿ ತುಂಬಿಕೊಂಡು ಬರುತ್ತಾರೆ. ಆದರೆ, ರೈತರು 10-20 ಕ್ವಿಂಟಾಲ್ ತರುತ್ತಾರೆ. ದಲ್ಲಾಳಿಗಳು ತರುವ ಉತ್ಪನ್ನಗಳಿಗೆ ಮೊದಲ ಆದ್ಯತೆ ಸಿಗುತ್ತಿದ್ದು, ರೈತರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ರೈತರು ಮೂರ‌್ನಾಲ್ಕು ದಿನಗಳು ವಾಹನಗಳನ್ನು ನಿಲ್ಲಿಸಿಕೊಂಡು ಕಾಯುವ ಜತೆಗೆ ವಾಹನಕ್ಕೆ ದುಪ್ಪಟ್ಟು ಬಾಡಿಗೆ ನೀಡಬೇಕಿದೆ ಎಂದು ಆರೋಪಿಸಿದರು.


ಗ್ರೇಡ್ ತಪಾಸಣೆಗಾಗಿ ಗ್ರೇಡರ್‌ಗಳು ನೇಮಕವಾಗಿದ್ದಾರೆ. ಯಾವುದೇ ಅಧಿಕಾರಿಗಳು ಹಾಜರಿರದಿದ್ದರೂ ರಾತ್ರಿ ವೇಳೆ ಅಕ್ರಮವಾಗಿ ಗ್ರೇಡ್ ಪರೀಕ್ಷೆ ಮಾಡದೆ ದಲ್ಲಾಳಿಗಳಿಂದ ಖರೀದಿಸಲಾಗುತ್ತಿದೆ. ರೈತರ ತರುವ ಉತ್ಪನ್ನಗಳಲ್ಲಿ ಕೊಂಚ ಧೂಳು ಮಿಶ್ರಣವಾಗಿದ್ದರೂ ತಿರಸ್ಕರಿಸುತ್ತಾರೆ ಎಂದು ದೂರಿದರು.


ಮಾಹಿತಿ ತಿಳಿದು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಕೇಂದ್ರಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿ, ಟ್ರಾನ್ಸ್‌ಪೋರ್ಟ್, ಕಾರ್ಮಿಕರ ಸಮಸ್ಯೆ ಬಗ್ಗೆ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಜತೆಗೆ ಹೋಬಳಿಗೊಂದು ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಲಾಗುವುದು ಎಂದರು.


ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾತನಾಡಿ, ಸಮಸ್ಯೆಗಳ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.