ಕ್ಷಯ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಜತೆಗೆ ರೋಗಿಗಳಲ್ಲಿ ದೀರ್ಘಕಾಲದವರೆಗೆ ಉಳಿಯುವ ಕಾಯಿಲೆಯಾಗಿದೆ. ಆದರೆ ಕ್ಷಯ ರೋಗಿಗಳನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದರೆ ಕ್ಷಯರೋಗ ಮುಕ್ತ ಭಾರತವನ್ನು ನಿರ್ಮಿಸಬಹುದು ಎಂದು ಆರೋಗ್ಯ ಇಲಾಖೆ ಮೈಸೂರು ವಿಭಾಗೀಯ ಸಹ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಅಕಾಡೆಮಿ ಸಹಯೋಗದಲ್ಲಿ ಜೆ.ಕೆ. ಮೈದಾನದ ಅಮೃತ್ ಮಹೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷಯರೋಗ ಮುಕ್ತ ಗ್ರಾಮಗಳನ್ನು ನಿರ್ಮಿಸಲು ಜನಾಂದೋಲನ ಮಾದರಿಯಲ್ಲಿ ಅಭಿಯಾನ ನಡೆಸಬೇಕಾದ ಅಗತ್ಯವಿದೆ. ಇಲ್ಲವಾದರೆ ಇಡೀ ದೇಶ ಕ್ಷಯರೋಗ ಮಯವಾಗಿ ಪರಿವರ್ತನೆಗೊಳ್ಳುವ ಅಪಾಯವಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶ ರೋಗದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ನಿರ್ಮೂಲನೆಗಾಗಿ ಸರ್ಕಾರ ಮತ್ತು ಆರೋಗ್ಯ ಇಲಾಖೆ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಜತೆಗೆ ಸಾರ್ವಜನಿಕರೂ ಕೈಜೋಡೊಸಬೇಕು. ಒಂದು ಕೈ ಸೇರಿದರೆ ಚಪ್ಪಾಳೆಯಾಗುವುದಿಲ್ಲ. ಸಮಾಜದ ಸಹಕಾರವಿದ್ದರೆ ಯಾವ ಕಾರ್ಯವೂ ಕಷ್ಟವಾಗುವುದಿಲ್ಲ ಎಂದು ತಿಳಿಸಿದರು.
ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಎಚ್.ಪಿ. ಶೋಭಾ ಮಾತನಾಡಿ, ಕ್ಷಯರೋಗ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುವುದರಿಂದ ವಿದ್ಯಾರ್ಥಿಗಳು ಮನಸು ಮಾಡಿದರೆ ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದರು.
ಎಲ್ಲ ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ಮತ್ತು ನೆರೆಹೊರೆ ಮನೆಗಳಲ್ಲಿ ಕ್ಷಯ ರೋಗಿಗಳು ಅಥವಾ ಕ್ಷಯ ರೋಗದ ಲಕ್ಷಣಗಳು ಇರುವ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಬೇಕು ಎಂದು ಸಲಹೆ ನೀಡಿದರು.
ಸಿಇಟಿಐನ ಎನ್‌ಜಿಒ ರಮಣ್ ಅರೋರ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸೇವಾಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಶ್ಲಾಘಿಸಿದರು.
ಆಶ್ರಯ ಹಹಸ್ತ ಟ್ರಸ್ಟ್‌ನ ನಿರ್ದೇಶಕ ಎನ್.ಕೆ. ಶರ್ಮಾ ಮಾತನಾಡಿ, ಟಿಬಿ ಕಾಯಿಲೆ ನಿರ್ಮೂಲನೆ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರ ಸಹಭಾಗಿತ್ವದ ಅಗತ್ಯವಿದೆ. ಬುಡಕಟ್ಟು ಸಮುದಾಯಗಳು ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಬುಡಕಟ್ಟು ಸಮುದಾಯಗಳ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳಾದ ಭೀಮನಹಳ್ಳಿ, ಹೆಬ್ಬಲಗುಪ್ಪೆ, ಬಾಚೇಗೌಡನಹಳ್ಳಿ, ಹೊಮ್ಮರಗಳ್ಳಿ, ಕಂಚಮಳ್ಳಿ, ಇಟ್ನ, ಕೊತ್ತೇಗಾಲ, ಮುಳ್ಳೂರು, ಸಾಗರೆ, ಹೆಗ್ಗನೂರು, ಬೋಳನಹಳ್ಳಿ, ಗಾಗೇನಹಳ್ಳಿ, ಹಳೇಬೀಡು, ಕರ್ಣಕುಪ್ಪೆ, ಮೋದೂರು, ಮುಳ್ಳೂರು, ತಟ್ಟೆಕೆರೆ , ಉದ್ದೂರು ಕಾವಲ್, ಚಂದೇಗಾಲ, ಅಡಗೂರು, ಗಂಧನಹಳ್ಳಿ, ಹರದನಹಳ್ಳಿ, ತಿಪ್ಪೂರು, ಹಗ್ಗಿನವಾಳು, ಕಂಪಲಾಪುರ, ಕೋಮಲಾಪುರ, ಮುತ್ತೂರು, ಪುನಾಡಹಳ್ಳಿ, ಗರ್ಗೇಶ್ವರಿ, ಕಲಿಯೂರು, ಕುಪ್ಯ, ಮಾದಾಪುರ, ಮುತ್ತಲವಾಡಿ, ಸೋಸಲೆ, ತುರುಗನೂರು, ವಾಟಾಳು ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್.ಜಯಂತ್, ಆರ್‌ಸಿಎಚ್‌ಒ ಡಾ. ಸಿರಾಜ್ ಅಹಮ್ಮದ್, ಕಾರ್ಯಕ್ರಮ ಸಂಯೋಜಕ ಕೆ.ಹನುಮಂತಪ್ಪ, ಆಶ್ರಯ ಹಸ್ತ ಟ್ರಸ್ಟ್ನ ವಿಕ್ರಮ್ ಪಾಟೀಲ್, ಡಾ.ಬೃಂದಾ, ಡಾ. ಸ್ವಾಮಿ ಇತರರು ಇದ್ದರು.
ಜಾಗೃತಿ ಜಾಥಾ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಜೆ.ಕೆ. ಮೈದಾನದ ಅಮೃತ್ ಮಹೋತ್ಸವ ಭವನದವರೆಗೆ ಜಾಗೃತಿ ಜಾಥಾ ಸಾಗಿತು. ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಿ.ಜಿ. ದಿನೇಶ್ ಅವರು ಕ್ಷಯರೋಗ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.