ವಿಶ್ವ ಆರೋಗ್ಯ ದಿನದ ಅಂಗವಾಗಿ ಭಾನುವಾರ ‘ಕ್ಲೀನ್ ಮೈಸೂರು, ಸೇವ್ ಫ್ಯೂಚರ್’ ಎಂಬ ಧ್ಯೇಯೋದ್ದೇಶದೊಂದಿಗೆ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನೆರವೇರಿತು.
ಸಮಾಗಮ ವೆಲ್‌ಫೇರ್ ಫೌಂಡೇಷನ್ ವತಿಯಿಂದ ವಿಜಯನಗರ ನಾಲ್ಕನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಹಿರಿಯ ನಾಗರಿಕರ ಸಂಘ, ವಿಜಯ ವಿನಾಯಕ ಸಂಘದ ಸಹಯೋಗದಲ್ಲಿ ವಿಜಯನಗರದ 4ನೇ ಹಂತದ ಮರಿಮಲ್ಲಪ್ಪ ಶಾಲಾ ವೃತ್ತದ ಬಳಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ತ್ಯಾಜ್ಯ ಹಾಗೂ ತ್ಯಾಜ್ಯದ ವಿಲೇವಾರಿಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ‘ಕ್ಲೀನ್ ಮೈಸೂರು ಸೇವ್ ಫ್ಯೂಚರ್’ ಎಂಬ ಧ್ಯೇಯೋದ್ದೇಶದೊಂದಿಗೆ ಸ್ವಚ್ಛತಾ ಜಾಗೃತಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಿದೆ. ಇಂದು ನಾನು ಎಲ್ಲಿಂದ ಎಲ್ಲಿಯವರೆಗೂ ಹೋದರೂ ಪ್ಲಾಸ್ಟಿಕ್ ಕಾಣಿಸುತ್ತಿದೆ. ಪ್ಲಾಸ್ಟಿಕ್ ಇಲ್ಲದ ರಸ್ತೆಯೇ ಇಲ್ಲ. ಇದು ನಮ್ಮ ದೇಶದ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರದ ವತಿಯಿಂದ ಹಲವಾರು ಕಾರ್ಯಕ್ರಮ, ನೀತಿ-ನಿಯಮಗಳನ್ನು ಜಾರಿಗೆ ತಂದರೂ ಸದರಿ ಸಮಸ್ಯೆ ಬಗೆ ಹರಿಸಲು ಆಗುತ್ತಿಲ್ಲ. ಈ ಪ್ಲಾಸ್ಟಿಕ್ ಹಾಗೂ ತ್ಯಾಜ್ಯದ ಸಮಸ್ಯೆಗಳು ಕಾಲಕಾಲಕ್ಕೆ ಹೆಚ್ಚಾಗುತ್ತಿವೆ. ಸಾರ್ವಜನಿಕರು ಮನಸ್ಸು ಮಾಡಿದರೆ ಮಾತ್ರ ಈ ಸಮಸ್ಯೆ ಬಗೆ ಹರಿಸಬಹುದಾಗಿದೆ ಎಂದರು.
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಕೃಷ್ಣೆಗೌಡ ಮಾತನಾಡಿ, ಹಳ್ಳಿಯ ಜೀವನವನ್ನು ತ್ಯಜಿಸಿ ಪಟ್ಟಣಕ್ಕೆ ಬಂದು ಆಧುನಿಕ ನಾಗರಿಕರಾಗಿದ್ದೇವೆ. ಆದರೆ, ಈಗ ಯಾಕಾದರೂ ನಗರಕ್ಕೆ ಬಂದಿದ್ದೇವೋ ಎಂದು ಬೇಸರವಾಗಿದೆ. ಹಳ್ಳಿಯಲ್ಲಿನ ಕಸ ನಿರ್ವಹಣೆ, ತಿಪ್ಪೆ ಗೊಬ್ಬರದ ಪದ್ಧತಿಯಿಂದ ಕೃಷಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು. ಇದರಿಂದ ಸಮಾಜಕ್ಕೆ ಪರಿಸರಕ್ಕೆ ಯಾವುದೇ ಹಾನಿಯಾಗುತ್ತಿರಲಿಲ್ಲ. ಆದರೆ ನಗರಗಳಲ್ಲಿನ ಯೋಜನೆಗಳು ನಿಧಾನಗತಿಯಲ್ಲಿ ಸಾಗುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಸಮಾಗಮ ವೆಲ್‌ಫೇರ್ ಫೌಂಡೇಷನ್ ನಿರ್ದೇಶಕ ಎಸ್.ಪಾಂಡು ಮಾತನಾಡಿ, ಬೃಹದಾಕಾರವಾಗಿ ಬೆಳೆಯುತ್ತಿರುವ ಈ ತ್ಯಾಜ್ಯದ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ನಿರ್ಮೂಲನೆ ಮಾಡಬೇಕು. ಇದಕ್ಕೆ ಜನ ಜಾಗೃತಿಯೊಂದೆ ಪರಿಹಾರ ಎಂದು ಹೇಳಿದರು.