ಜಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನು ಕೆಡಿಪಿ ಸದಸ್ಯ ಸದಾನಂದಗೌಡ ಬಿಳಗಲಿ ಉದ್ಘಾಟಿಸಿದರು. ಶಿವಲಿಂಗೇಗೌಡ, ರಾಜಶೇಖರ ಸ್ವಾಮಿ, ಅಮಿತ್ ಗೌಡ, ಲಕ್ಷ್ಮಮ್ಮ, ಜಿ.ಆರ್.ಗಿರಿಧರ್, ಎಂ.ಡಿ. ಶೇಖರ್ ಇತರರಿದ್ದರು.  
ನ್ಯೂಸ್

ಕ್ರೀಡೆಯಿಂದ ಉಜ್ವಲ ಭವಿಷ್ಯ ನಿರ್ಮಾಣ

ಸೊರಬ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳು ಸಹಕಾರಿ. ಕ್ರೀಡಾಪಟುಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಗುರಿ ಸಾಧನೆ ಕಡೆಗೆ ಮುನ್ನುಗ್ಗಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಜಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಜಿಪಂ, ತಾಪಂ, ಜಡೆ ಗ್ರಾಪಂ ಹಾಗೂ ಸರ್ಕಾರಿ ಪ್ರೌಢಶಾಲೆಯಿಂದ ಏರ್ಪಡಿಸಿದ್ದ 14 ಮತ್ತು 17 ವರ್ಷದೊಳಗಿನ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಾಧಿಸುವ ಛಲ ಮತ್ತು ಕಠಿಣ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯವಿದೆ. ಅನೇಕ ಗ್ರಾಮೀಣ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಕಷ್ಟು ನಿದರ್ಶನಗಳಿವೆ. ವಿದ್ಯಾರ್ಥಿಗಳಲ್ಲಿನ ಸೂಕ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದರು.

ಕ್ರೀಡಾಕೂಟ ಉದ್ಘಾಟಿಸಿದ ಕೆಡಿಪಿ ಸದಸ್ಯ ಸದಾನಂದ ಗೌಡ ಬಿಳಗಲಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿಯೂ ಮೀಸಲಾತಿ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ ಕ್ರೀಡಾಜ್ಯೋತಿ ಬೆಳಗಿದರು. ಜಡೆ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜಶೇಖರ ಸ್ವಾಮಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಅಮಿತ್ ಗೌಡ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಮುಖ್ಯಶಿಕ್ಷಕ ಜಿ.ಆರ್.ಗಿರಿಧರ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ತಾಪಂ ಇಒ ಡಾ. ಎನ್.ಆರ್.ಪ್ರದೀಪ್ ಕುಮಾರ್, ಡಿಡಿಪಿಐ ಎಸ್.ಆರ್. ಮಂಜುನಾಥ್, ಬಿಇಒ ಆರ್.ಪುಷ್ಪಾ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮಯನ್ವಯಾಧಿಕಾರಿ ದಯಾನಂದ ಕಲ್ಲೇರ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಂ.ಪ್ರಕಾಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ ಒಡೆಯರ್ ಇತರರಿದ್ದರು.