ನ್ಯೂಸ್

ಕ್ರೀಡೆ ಭಾವೈಕ್ಯತೆಯ ಸಂಕೇತ

ಹುಣಸೂರು: ಕ್ರೀಡೆ ಭಾವೈಕ್ಯತೆಯ ಸಂಕೇತವಾಗಿದೆ. ಕ್ರೀಡಾಪಟುಗಳಿಗೆ ಜಾತಿಮತದ ಭೇದವಿರುವುದಿಲ್ಲ. ಕ್ರೀಡೆ ಸ್ನೇಹವನ್ನಷ್ಟೇ ನೀಡಬಲ್ಲದು ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.


ಪಟ್ಟಣದ ಕಾಫಿವರ್ಕ್ಸ್ ರಸ್ತೆಯಲ್ಲಿ ಸ್ನೇಹಜೀವಿ ಸ್ಫೋರ್ಟ್ಸ್ ಅಕಾಡೆಮಿ ವತಿಯಿಂದ ಸ್ಥಾಪನೆ ಮಾಡಿರುವ ಕ್ರಿಕೆಟ್ ತರಬೇತಿ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಹುಣಸೂರು ನಗರದಲ್ಲಿ 30 ವರ್ಷಗಳ ಹಿಂದೆ ದೇಶದಲ್ಲೇ ಎರಡನೇ ಫ್ಲಡ್ ಲೈಟ್ ಕ್ರಿಕೆಟ್ ಟೂರ್ನಮೆಂಟ್‌ಅನ್ನು ಆಯೋಜಿಸಿದ್ದ ಹೆಮ್ಮೆ ನಮ್ಮೆಲ್ಲರದ್ದಾಗಿದೆ. ದೆಹಲಿಯ ಫಿರೋಜ್ ಷಾ ಕೋಟ್ಲಾ (ಇದೀಗ ಅರುಣ್ ಜೇಟ್ಲಿ ಕ್ರೀಡಾಂಗಣ) ಮೈದಾನದಲ್ಲಿ ಕೀರ್ತಿ ಆಜಾದ್ ನೇತೃತ್ವದ ತಂಡ ದೇಶದ ಮೊದಲ ಫ್ಲಡ್ ಲೈಟ್ ಕ್ರಿಕೆಟ್ ಪಂದ್ಯವಾಡಿತ್ತು. ನಂತರ ಹುಣಸೂರಿನಲ್ಲಿ ಎರಡನೆಯದಾಗಿ ಪಂದ್ಯಾವಳಿ ನಡೆದಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರಿಕೆಟ್ ಪಟುಗಳನ್ನು ಹುಣಸೂರಿನಲ್ಲಿ ಆಡಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.


ಇಂದು ಕ್ರಿಕೆಟ್ ಅಂದರೆ ಕೇವಲ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಆಗಿ ಉಳಿದಿಲ್ಲ. ಕ್ರಿಕೆಟ್‌ನ ಪರಿಕಲ್ಪನೆ ಡ್ರೆಸ್ಸಿಂಗ್ ರೂಂನಿಂದ ಆರಂಭಗೊಂಡು ಪೆವಿಲಿಯನ್ ತನಕವೂ ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಅದಕ್ಕಾಗಿ ಕೌಶಲತೆ ಹೊಂದಿರುವ ಯುವಕರ ದಂಡು ಇದೆ. ಕ್ರೀಡೆಯಲ್ಲಿ ತಂಡದ ಗೆಲುವು, ವ್ಯಕ್ತಿಯ ಸಾಧನೆಗಿಂತ ಕ್ರೀಡೆ ಗೆಲ್ಲಬೇಕಿದೆ. ಕ್ರೀಡಾಲೋಕದಲ್ಲಿ ರಾಜಕೀಯ, ಅಸೂಯೆ ತೊಲಗಬೇಕಿದೆ. ತಾಲೂಕಿನ ಯುವಕ್ರೀಡಾಪಟುಗಳಿಗೆ ಅನುಕೂಲವಾಗಲು ನೂತನ ತಂತ್ರಜ್ಞಾನವನ್ನು ಹೊಂದಿದ ಬೌಲಿಂಗ್ ಮಷಿನ್ ತರಲಾಗಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ತರಬೇತಿ ಕೇಂದ್ರ ಸ್ಥಾಪಿಸಿರುವುದು ನನಗೆ ಹೆಮ್ಮೆ ತಂದಿದೆ ಎಂದರು.


ತಾಲೂಕಿನ ಹಿರಿಯ ಕ್ರಿಕೆಟ್ ಪಟುಗಳಾದ ನಾಗರಾಜ್, ಬಾಬು, ಸೀನಪ್ಪ, ರಾಜು, ಉದ್ಯಮಿ ಅಮರನಾಥ್, ಶಿವರಾಜೇಗೌಡ, ಮಧು, ರಮೇಶ್, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ್, ತರಬೇತುದಾರ ಎನ್.ಭರತ್, ಕ್ರೀಡಾಪಟುಗಳು ಹಾಜರಿದ್ದರು.