ಹನಗೋಡು: ಹುಣಸೂರು ತಾಲೂಕಿನಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಇವರ ಉನ್ನತಿಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ಹನಗೋಡಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಹನಗೋಡು ವಲಯ ಮಟ್ಟದ ಕ್ರೀಡಾಕೂಟವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಈಗ ಹುಣಸೂರು ತಾಲೂಕಿನಾದ್ಯಂತ ಶಾಲಾ ಮಕ್ಕಳ ಕ್ರೀಡಾ ಹಬ್ಬ ಜರುಗುತ್ತಿದ್ದು, ಎಲ್ಲ ಕ್ರೀಡಾಕೂಟಗಳಿಗೂ ಸಹಕಾರ ನೀಡುತ್ತಾ ಬಂದಿದ್ದೇನೆ. ತಾಲೂಕಿನಿಂದ ಜಿಲ್ಲಾ ವಿಭಾಗೀಯ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಕೊಡಿಸುವೆ. ಕ್ರೀಡಾಪಟುಗಳು ಹೆಚ್ಚು ಆಸಕ್ತಿವಹಿಸಿ ತಾಲೂಕಿಗೆ ಹೆಚ್ಚು ಸ್ಥಾನ ಪಡೆಯುವಂತೆ ಸಲಹೆ ನೀಡಿದರು.
ಹನಗೋಡು ಪ್ರೌಢಶಾಲಾ ಮುಖ್ಯಶಿಕ್ಷಕ ಇರ್ಷಾದ್ ಕ್ರೀಡಾಕೂಟಕ್ಕೆ ನೆರವಾದವರನ್ನು ಸ್ಮರಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್ ಮಾತನಾಡಿದರು. ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪಡೆದ ನೇರಳಕುಪ್ಪೆ ಪ್ರೌಢಶಾಲೆಯ ಮುಖ್ಯಶಿಕ್ಷಕ ಕುಮಾರಸ್ವಾಮಿ ಅವರನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಸನ್ಮಾನಿಸಿದರು.
ಗ್ರಾಪಂ ಅಧ್ಯಕ್ಷ ಚನ್ನಯ್ಯ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ರತ್ನಾ ಶ್ರೀಧರ್, ಬೋರೇಗೌಡ, ಛಾಯಾ ನಾಗೇಗೌಡ, ಶಿವಣ್ಣ ಸಂತೋಷ್, ಈಶ್ವರ್, ಸಂಗೀತಾ, ಮಹದೇವ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ತಾಪಂ ಮಾಜಿ ಸದಸ್ಯ ಆರ್.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಿರಂಗೂರು ಬಸವರಾಜು, ಸುಭಾಷ್, ಮುಖಂಡರಾದ ಎಚ್.ಎಸ್.ವೆಂಕಟಪ್ಪ, ಹನಗೋಡು ಮಂಜುನಾಥ್, ಪುಟ್ಟಸ್ವಾಮಿ, ಪಲ್ಲವಿ ಮಧು, ನಂಜುಂಡ, ಪ್ರಭಾಕರ್ ಸೇರಿದಂತೆ ಅನೇಕರಿದ್ದರು.