ಹುಣಸೂರಿನಲ್ಲಿ ಗ್ರಾಮೀಣ ದಸರಾ ಕ್ರೀಡಾಕೂಟದ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು.  
ನ್ಯೂಸ್

ಕ್ರೀಡಾಕೂಟದಲ್ಲಿ ಸಂಭ್ರಮಿಸಿದ ನಾಗರಿಕರು

ಹುಣಸೂರು: ಮಂಡಿಯವರೆಗಿನ ಕೆಸರುಗದ್ದೆಯಲ್ಲಿ ಹಲವರು ಎದ್ದು ಬಿದ್ದು ಓಡಿದರು..ಓಡುವ ಭರದಲ್ಲಿ ಬಿದ್ದರೂ ಜಟ್ಟಿ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮತ್ತೆ ಎದ್ದು ಓಡಿದರು…ಪುರುಷರಿಗಿಂತ ನಾವೇನು ಕಡಿಮೆ ಎಂಬಂತೆ ಮಹಿಳಾಮಣಿಗಳು ಪೈಪೋಟಿ ನೀಡಿದರು. ತಾಲೂಕು ಆಡಳಿತದ ವತಿಯಿಂದ ಆಯೋಜನೆಗೊಂಡಿದ್ದ 2022ನೇ ಸಾಲಿನ ಗ್ರಾಮೀಣ ದಸರಾ ಕ್ರೀಡಾಕೂಟದಲ್ಲಿ ಮಂಗಳವಾರ ಕಂಡುಬಂದ ದೃಶ್ಯಗಳಿವು.


ಯಾವುದೇ ವಯೋಮಾನದ ಮಿತಿಯಿಲ್ಲದೇ ಆಯೋಜನೆಗೊಂಡಿದ್ದ ಎಲ್ಲ ಸ್ಪರ್ಧೆಗಳಲ್ಲೂ ಸಾರ್ವಜನಿಕರು ಸಂತಸದಿಂದ ಪಾಲ್ಗೊಂಡಿದ್ದರು. ಕೂಟ ನೋಡಲು ನೆರೆದಿದ್ದ ಜನರು ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.


ಬೆಳಗ್ಗೆ 9ಕ್ಕೆ ಹುಣಸೂರು-ಕೆ.ಆರ್.ನಗರ ಹೆದ್ದಾರಿಯ ಜಮೀನಿನಲ್ಲಿ ಕೆಸರುಗದ್ದೆ ಓಟ ಆಯೋಜಿಸಲಾಗಿತ್ತು. ಪುರುಷರಲ್ಲಿ ಬಹುತೇಕ ಯುವಕರೇ ಭಾಗವಹಿಸಿದ್ದರು. ಮಹಿಳೆಯರ ವಿಭಾಗದಲ್ಲಿ 40-45 ವರ್ಷ ಮೇಲ್ಪಟ್ಟ ಮಹಿಳೆಯರು ಸೀರೆಯುಟ್ಟುಕೊಂಡೇ ಓಡಿದರು.


ನಗರಸಭಾ ಮೈದಾನದಲ್ಲಿ ಪುರುಷರಿಗೆ ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ ಆಯೋಜಿಸಲಾಗಿತ್ತು. ಮೂಟೆ ಹೊತ್ತು ಓಡುವ ವೇಳೆ ಗುರಿ ತಲುಪಬೇಕೆನ್ನುವ ಭರದಲ್ಲಿ ಮೂಟೆ ಜಾರಿ ಬಿದ್ದರೂ ಗಮನಿಸದೇ ಗುರಿ ತಲುಪಿ ನಂತರ ಮೂಟೆ ಬಿಟ್ಟೆನಲ್ಲಾ ಎಂದು ವ್ಯಥೆಪಟ್ಟವರನ್ನು ಕಂಡು ಜನರು ನಕ್ಕು ನಕ್ಕು ಸುಸ್ತಾದರು.

ಹುಣಸೂರಿನಲ್ಲಿ ಗ್ರಾಮೀಣ ದಸರಾ ಕ್ರೀಡಾಕೂಟದ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು.


ಗೋಣಿತಾಟನ್ನು ಕಾಲಿಗೆ ಕಟ್ಟಿಕೊಂಡು ಓಡಿದವರ ಪರಿ ಹೇಳತೀರದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆಯಿತು. ಕೆಸರುಗದ್ದೆ ಓಟಕ್ಕೆ ಹಸಿರುಬಾವುಟ ತೋರುವ ಮೂಲಕ ಕ್ರೀಡಾಕೂಟಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.


ತಾಪಂ ಇಒ ಬಿ.ಕೆ.ಮನು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ವೆಂಕಟೇಶ್, ಕೃಷಿ ಅಧಿಕಾರಿ ವೆಂಕಟಾಚಲ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್ ಇನ್ನಿತರ ಅಧಿಕಾರಿಗಳು ಇದ್ದರು.