ಎನ್.ಆರ್.ಪುರ: ಯುವಕರು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪಿಎಸ್‌ಐ ಬಿ.ಎಸ್.ನಿರಂಜಗೌಡ ತಿಳಿಸಿದರು.
ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಭಾನುವಾರ ಅಂಬೇಡ್ಕರ್ ನಗರದ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದವರು ಏರ್ಪಡಿಸಿದ್ದ ತಾಲೂಕುಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಹಠ, ಗಲಾಟೆಗೆ ಅವಕಾಶ ಆಗದಂತೆ ಒಗ್ಗಟ್ಟಿನಿಂದ ಕ್ರಿಕೆಟ್ ಪಂದ್ಯಾವಳಿ ನಡೆಸಬೇಕು. ಪೊಲೀಸ್ ಇಲಾಖೆಯಿಂದ ಕ್ರೀಡಾಕೂಟಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು.
ಡಿಎಸ್‌ಎಸ್ ಮುಖಂಡ ಡಿ.ರಾಮು ಮಾತನಾಡಿ, ಮುಂದಿನ ದಿನಗಳಲ್ಲಿ ಡಿಎಸ್‌ಎಸ್‌ನಿಂದ ಶೃಂಗೇರಿ ಕ್ಷೇತ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಕೆ.ಗಂಗಾಧರ್ ಮಾತನಾಡಿ, ಯುವಕರು ಉತ್ತಮ ಸಂಘಟನೆ ಮಾಡಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದು ಇದಕ್ಕೆ ಅಗತ್ಯ ಸಹಕಾರ ನೀಡಿದ್ದೇವೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಮುಕುಂದ ಮಾತನಾಡಿ, ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ವೃದ್ಧಿಯಾಗಲಿದೆ. ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಒಟ್ಟು 20 ತಂಡಗಳು ಭಾಗವಹಿಸಿದ್ದವು. ಎ.ಬಿ.ಯುನಿಟೆಡ್‌ನ ಹರಿಪ್ರಸಾದ್ ಮತ್ತು ತಂಡದವರು ಪ್ರಥಮ ಸ್ಥಾನದೊಂದಿಗೆ 10 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆದರು. ಎ.ಬಿ. ಕ್ರಿಕೆಟರ್ಸ್‌ನ ಮನೋಜ್ ಮತ್ತು ತಂಡ ದ್ವಿತೀಯ ಸ್ಥಾನದೊಂದಿಗೆ 6 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆದರು. ಭಾನುಮತಿ ಮತ್ತಿತರರಿದ್ದರು.