ನ್ಯೂಸ್

ಕ್ರೀಡಾ ಬಾಂಧವ್ಯ ವೃದ್ಧಿಸಿಕೊಳ್ಳಬೇಕು: ಎಚ್.ಎನ್. ವಿಜಯ್


ಅರಕಲಗೂಡು: ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಾಳುಗಳು ಕೂಡ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಬಾಂಧವ್ಯ ವೃದ್ಧಿಸಿಕೊಳ್ಳಬೇಕು ಕಾಂಗ್ರೆಸ್ ಮುಖಂಡ ಎಚ್.ಎನ್. ವಿಜಯ್ ಸಲಹೆ ನೀಡಿದರು.


ಪಟ್ಟಣದ ಕ್ರೀಡಾಂಗಣದಲ್ಲಿ ಶ್ರೀ ಭಗೀರಥ ಗೆಳೆಯರ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಶ್ರೀ ಭಗೀರಥ ಪ್ರೀಮಿಯರ್ ಲೀಗ್ ಸೀಸನ್- 3 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ಪ್ರಸ್ತುತ ದಿನಗಳಲ್ಲಿ ಯುವ ಜನತೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಜತೆಗೆ ತಮ್ಮ ವ್ಯಾಸಂಗದ ಕಡೆಗೂ ಹೆಚ್ಚಿನ ಗಮನವನ್ನು ವಹಿಸುವ ಮೂಲಕ ಉನ್ನತ ವಿದ್ಯಾಭ್ಯಾಸ ಮಾಡಬೇಕು. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನದಾಗಿ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕು ಎಂದು ತಿಳಿಸಿದರು.


ಪಪಂ ಸದಸ್ಯ ಮಂಜುನಾಥ್, ಮುಖಂಡರಾದ ಲಕ್ಕೂರು ಮಹೇಶ್, ನಾಗರಾಜ್, ಕೆ.ಟಿ. ಮೋಹನ್ ಕುಮಾರ್, ಭಗೀರಥ ಗೆಳೆಯರ ಬಳಗದ ಚಂದ್ರು, ಮಂಜುನಾಥ್, ಕುಮಾರಣ್ಣ, ಗುರು, ನವೀನ್ ಇತರರಿದ್ದರು.