ಔರಾದ್‌ನಲ್ಲಿ ಕುಡಿಯುವ ನೀರಿನ ಬಗ್ಗೆ ಸೋಮವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಮಾತನಾಡಿದರು. ತಹಸೀಲ್ದಾರ್‌ರಾದ ಮಲಶೆಟ್ಟಿ ಚಿದ್ರೆ, ಅಮಿತಕುಮಾರ ಕುಲರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ, ಎಇಇ ಮಾಣಿಕರಾವ ಕೆರೂರ್ ಇದ್ದರು.  
ನ್ಯೂಸ್

ಕ್ಯಾನ್ಸರ್‌ನಂತೆ ಜೆಜೆಎಂ ಕಾಮಗಾರಿ ಕಳಪೆ

ಔರಾದ್: ವಿಧಾನಸಭೆ ಕ್ಷೇತ್ರದ ಎರಡು ತಾಲೂಕುಗಳಲ್ಲಿ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿ ಬಹಳಷ್ಟು ಕಡೆ ಕಳಪೆಯಾದರೂ ಅಧಿಕಾರಿಗಳು ನನ್ನ ಗಮನಕ್ಕೆ ತರದೆ ಶೇ.೮೦ ಬಿಲ್ ಪಾಸ್ ಮಾಡಿದ್ದು ಸರಿಯಲ್ಲ. ದೊಡ್ಡ ಯೋಜನೆಯೊಂದು ಕ್ಯಾನ್ಸರ್‌ಗೆ ಬಲಿಯಾದಂತೆ ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ ಎಂದು ಶಾಸಕ ಪ್ರಭು ಚವ್ಹಾಣ್ ಕಿಡಿಕಾರಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಪರಿಹಾರ ಬಗ್ಗೆ ಸೋಮವಾರ ಕರೆದಿದ್ದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮತ್ತು ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದಂತೆ ಔರಾದ್(ಬಿ) ಹಾಗೂ ಕಮಲನಗರ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಎಲ್ಲ ಪಿಡಿಒಗಳ ಮುಖಾಂತರ ಗ್ರಾಮವಾರು ಮಾಹಿತಿ ಪಡೆದ ಶಾಸಕರು, ಪ್ರತಿದಿನ ಒಂದಿಲ್ಲೊಂದು ಗ್ರಾಮಸ್ಥರು ನೀರಿನ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಪಿಡಿಒಗಳು ಕಚೇರಿಯಲ್ಲಿ ಲಭ್ಯವಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಖಾಸಗಿ ಬೋರ್‌ವೆಲ್ ಇಲ್ಲವೇ ಹೊಸ ಬೋರ್‌ವೆಲ್ ಕೊರೆಸಿ ನೀರು ಸರಬರಾಜು ಮಾಡಬೇಕು. ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸಬೇಕು. ತೀವ್ರತೆ ಹೆಚ್ಚಿರುವ ಗ್ರಾಮಗಳಿಗೆ ಮಾತ್ರ ಟ್ಯಾಂಕರ್ ನೀರು ಪೂರೈಸಬೇಕು ಎಂದು ಸೂಚಿಸಿದರು.

ಪಿಡಿಒ ಸೇರಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ತಮ್ಮ ಕೇಂದ್ರದಲ್ಲಿ ವಾಸ್ತವ್ಯ ಮಾಡಬೇಕು. ಎಲ್ಲರೂ ಮೊಬೈಲ್‌ಗಳನ್ನು ದಿನದ ೨೪ ತಾಸು ಚಾಲ್ತಿಯಲ್ಲಿಟ್ಟು ಸಾರ್ವಜನಿಕರ ಕರೆಗಳಿಗೆ ತಕ್ಷಣ ಸ್ಪಂದಿಸಬೇಕು. ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ತಕ್ಷಣ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಜೆಜೆಎಂ ಕಾಮಗಾರಿ ಸಮರ್ಪಕ ನಡೆದರೆ ಇಷ್ಟೊಂದು ಸಮಸ್ಯೆ ಇರುತ್ತಿರಲಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ವಿಫಲವಾಗಿದೆ. ಇದರಡಿ ಅವಕಾಶವಿರುವ ಕಡೆ ಹೊಸ ಬಾವಿ, ಕೊಳವೆಬಾವಿ ಕೊರೆಸಬೇಕು ಎಂದರು.

ಕೆಲವೆಡೆ ಜೆಸ್ಕಾಂ ಕೆಲಸ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದಾಗ ಕುಡಿಯುವ ನೀರಿನ ಕೆಲಸ ಆದ್ಯತೆ ಮೇಲೆ ಮಾಡಿಕೊಡಬೇಕು. ಈ ವಿಷಯದಲ್ಲಿ ವಿಳಂಬಕ್ಕೆ ಆಸ್ಪದ ಕೊಡಬಾರದೆಂದು ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು.

ವಸತಿ ಯೋಜನೆ ಕುರಿತು ಎಲ್ಲ ಗ್ರಾಪಂಗಳಿಗೆ ಗುರಿ ನಿಗದಿಪಡಿಸಲಾಗಿದೆ. ಮಾಸಾಂತ್ಯದೊಳಗೆ ಪ್ರಗತಿ ಕಾಣಿಸಬೇಕು. ವಸತಿರಹಿತರಿಗೆ ಮನೆ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಜರುಗಿಸುವಂತೆ ತಾಪಂ ಇಒಗೆ ನಿರ್ದೇಶನ ನೀಡಿದರು.

ಔರಾದ್ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಮಾಣಿಕರಾವ ಕೆರೂರ್, ಜೆಸ್ಕಾಂ ಎಇಇ ರವಿ ಕಾರಭಾರಿ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಸಂತೋಷ ಪಾಟೀಲ್, ಅನೀಲಕುಮಾರ ಪಾಟೀಲ್, ಶರಣಪ್ಪ ಗಾದಗೆ, ನರಸಿಂಗ ಮಾನೆ, ಸಂಗೀತಾ ದೇಶಮುಖ ಇತರರಿದ್ದರು.

ಬಿಲ್ ಪಾವತಿಯಲ್ಲಿ ಲೋಪ ಅಧಿಕಾರಿಗಳು ತರಾಟೆಗೆ : ಜಲಜೀವನ ಮಿಷನ್ ಯೋಜನೆ(ಜೆಜೆಎಂ) ಅಡಿ ಕಡಿಮೆ ಕೆಲಸವಾದರೂ ಗುತ್ತಿಗೆದಾರರಿಗೆ ಹೆಚ್ಚಿನ ಹಣ ಪಾವತಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ವಿನಾಯಕ ಮೋರೆ ಅವರನ್ನು ಶಾಸಕ ಚವ್ಹಾಣ್ ತೀವ್ರ ತರಾಟೆಗೆ ತೆಗೆದುಕೊಂಡರು. ಖೇರ್ಡಾ(ಬಿ)ನಲ್ಲಿ ಶೇ.೩೦ ಮಾತ್ರ ಕೆಲಸವಾಗಿದ್ದು, ಶೇ.೭೦ ಬಿಲ್ ಪಾವತಿಸಲಾಗಿದೆ. ಸಾವರಗಾಂವದಲ್ಲಿ ಶೇ.೪೦ ಕೆಲಸಕ್ಕೆ ಶೇ.೬೦ ಹಣ ಪಾವತಿಸಿದ್ದು ಹೇಗೆ? ಹುಲ್ಯಾಳ, ಬಾವಲಗಾಂವ, ಹೊಕ್ರಾಣಾ ಸೇರಿ ವಿವಿಧೆಡೆ ಕೆಲಸ ಕಡಿಮೆಯಾದರೂ ಹೆಚ್ಚಿನ ಬಿಲ್ ಪಾವತಿಸಿರುವ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ನೀವು ಹೀಗೆ ಮಾಡುವುದರಿಂದಲೇ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ತಾಪಂ ಇಒಗೆ ಶಾಸಕರು ಸೂಚಿಸಿದರು.

ಪಿಡಿಒ ಅತ್ಯಂತ ಪವರ್ ಫುಲ್ ಪೋಸ್ಟ್. ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಮನೆಯಿಲ್ಲದ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಸತಿ ಯೋಜನೆ ಲಾಭ ದೊರಕಿಸಿಕೊಡಬೇಕು.

| ಪ್ರಭು ಚವ್ಹಾಣ್ ಶಾಸಕ